ಕಲಬುರಗಿ: ಅಯೋಧ್ಯ ನಗರದಂತೆ ನರೋಣಾ ಕ್ಷೇಮಲಿಂಗೇಶ್ವರರ ಇತಿಹಾಸ ಭಾರತೀಯ ಪಠ್ಯಕ್ಕೆ ಸೇರ್ಪಡೆಗೊಳಿಸುವುದರಿಂದ ಈ ಕ್ಷೇತ್ರದ ಮಹಿಮೆ ದೇಶದೆಲ್ಲೆಡೆ ಪಸರಿಸಲು ಸಾಧ್ಯವಾಗುತ್ತದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಪ್ರಾಪಯಟ್ಟರು.
ಆಳಂದ ತಾಲೂಕಿನ ನರೋಣಾ ಗ್ರಾಮದ ಐತಿಹಾಸಿಕ ಸುಕ್ಷೇತ್ರ ಕ್ಷೇಮಲಿಂಗೇಶ್ವರ ದೇವಸ್ಥಾನದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-6ರಲ್ಲಿ ಮಾತನಾಡಿದ ಅವರು, ಶ್ರೀ ರಾಮನು ರಾವಣನನ್ನು ಸಂಹರಿಸಿ, ಪಾಪ ಪರಿಹಾರಕ್ಕಾಗಿ ಕೋಟಿ ಲಿಂಗ ಸ್ಥಾಪನೆಯ ಗುರಿಯನ್ನಿಟ್ಟುಕೊಂಡು ದೇಶದಾದ್ಯಂತ ಪರ್ಯಟನದೊಂದಿಗೆ ಎಲ್ಲಡೆ ಲಿಂಗಗಳನ್ನು ಸ್ಥಾಪಿಸುತ್ತಾ, ಕೊನೆಯದಾಗಿ ನರೋಣಾ ಸುಕ್ಷೇತ್ರ ಕ್ಷೇಮಲಿಂಗೇಶ್ವರರ ಸ್ಥಳದಲ್ಲಿ ಲಿಂಗವನ್ನು ಸ್ಥಾಪಿಸಿದ್ದಾರೆ ಎಂದರು.
ಶ್ರೀ ರಾಮನು ಇಲ್ಲಿ ಕೋಟಿ ಲಿಂಗ ಸ್ಥಾಪನೆಯ ನಂತರ ರಾವಣ ಎಂದು ಕೂಗಿದಾಗ, ಆತನ ಕೂಗು ಕೇಳಲಿಲ್ಲ. ಆಗ ಮೂಲ ಹೆಸರಾದ ‘ಚಿಮಣಾಪೂರ’ ಎಂಬ ಊರು, ‘ನರಾವಣ’ ಎಂದಾಯಿತು. ನಂತರ ‘ನರಾವಣ’ವನ್ನು ‘ನರೋಣಾ’ ಎಂದು ಕರೆಯಲು ಆರಂಭವಾಯಿತು ಎಂದು ಪುರಾಣಗಳಿಂದ ತಿಳಿದುಬರುತ್ತದೆ ಎಂದರು.
ದೇವಸ್ಥಾನ ಸಮಿತಿಯ ಸದಸ್ಯ ಬಾಬುರಾವ ವಾಲಿ ಮಾತನಾಡಿ, ಈ ಕ್ಷೇತ್ರ ನಾಡಿನಲ್ಲಿ ‘ದಕ್ಷಿಣಕಾಶಿ’ ಎಂದು ಹೆಸರು ವಾಸಿಯಗಿದ ಸುಕ್ಷೇತ್ರವಾಗಿದೆ. ನರೋಣಾ ಪುಣ್ಯ ಕ್ಷೇತ್ರವು ಕ್ಷೇತ್ರಪಾಲ ಶ್ರೀ ಕ್ಷೇಮಲಿಂಗೇಶ್ವರ ದೇವಸ್ಥಾನವಿರುವ ತಾಣ. ಇಲ್ಲಿ ಇರುವ ಕುಂಡಗಳ ಮಹಿಮೆ ಅಪಾರವಾಗಿದೆ. ಸರ್ವರಿಗೂ ಕ್ಷೇಮವನ್ನು ಬಯಸುವ ಕ್ಷೇಮಲಿಂಗೇಶ್ವರರ ಶಕ್ತಿ ಅನನ್ಯವಾಗಿದೆ. ಎಲ್ಲರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ. ಈ ಕ್ಷೇತ್ರದ ಮಹಿಮೆಯ ಬಗ್ಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಚುರಗೊಳಿಸುವ ಕಾರ್ಯ ಜರುಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೂಜ್ಯ ಡಾ.ಗುರುಮಹಾಂತ ಸ್ವಾಮೀಜಿ, ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಶಂಕರ ಜಿ.ವಾಲಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಅರ್ಚಕ ಮಹಾಂತಯ್ಯ ಸ್ವಾಮಿ, ಪ್ರಮುಖರಾದ ಬಸವರಾಜ ಚಕ್ಕಿ, ಸುಭಾಷ್ಚಂದ್ರ ವಾಲಿ, ಚನ್ನಪ್ಪ ವಾಲಿ, ಸಿದ್ದು ಸರಸಂಬಿ, ಮೈನಪ್ಪ ಹೊಸಮನಿ, ಶರಣು ಬೊಮ್ಮನಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.