ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ಶಿಕ್ಷಣ ಕ್ರಾಂತಿ: ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ ಅಪ್ಪ

ಗ್ರಾಮೀಣ

ಚಿತ್ತಾಪುರ: ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಕಳೆದ 42 ವರ್ಷಗಳಿಂದ ಈ ಭಾಗದ ಜನರ ಆಶಾಕಿರಣವಾಗಿರುವ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ರಾಂತಿ ಮಾಡುತ್ತಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಚೇರ್ಪರ್ಸನ್ ಡಾ. ದಾಕ್ಷಾಯಣಿ ಶರಣಬಸಪ್ಪ ಅಪ್ಪ ಹೇಳಿದರು.

ಸಮೀಪದ ರಾವೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಿದ್ದಲಿಂಗೇಶ್ವರ ವಸತಿ ನಿಲಯ ಮತ್ತು ಪಾಕಶಾಲೆಯ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿ ಅವರು, ಸಿದ್ದಲಿಂಗೇಶ್ವರ ತ್ರಿವಿಧ ದಾಸೋಹದ ಮೂಲಕ ಈ ಭಾಗದಲ್ಲಿ ಉತ್ತಮ ಸೇವೆ ಮಾಡುತ್ತಿರುವ ಶ್ರೀಮಠದ ಕೈoಕರ್ಯ ಮೆಚ್ಚುವಂತದ್ದು. ಸಮಾಜದಲ್ಲಿ ದುಡ್ಡಿದ್ದವರು ದೊಡ್ಡವರಲ್ಲ, ಜ್ಞಾನ ಸಂಪಾದನೆ ಮಾಡಿದವರೆ ನಿಜವಾದ ದೊಡ್ಡವರು. ಆದ್ದರಿಂದ ಇವತ್ತು ತಾಯಂದಿಯರು ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸಿ ವಿದ್ಯಾವಂತರಾಗಿ ಮಾಡುವ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಿ. ಸಂಸ್ಕಾರ ಇವತ್ತಿನ ದಿನಗಳಲ್ಲಿ ನಾವು ಮಕ್ಕಳಿಗೆ ಕುಟುಂಬ, ಶಾಲೆಗಳ ಮೂಲಕ ಸಂಸ್ಕಾರ ಮುಡಿಸಬೇಕಾದ ಅವಶ್ಯಕತೆಯಿದೆ. ಮೌಲ್ಯಗಳ ಕುಸಿತದಿಂದ ಸಮಾಜದಲ್ಲಿ ಅನೇಕ ಅಪರಾಧ ಕೃತ್ಯಗಳು ನಡೆಯುತ್ತಿವೆ. ಯುವಕರು ಹಾದಿ ತಪ್ಪುತ್ತಿದ್ದಾರೆ ಆದ್ದರಿಂದ ತಂದೆ ತಾಯಿ ಮೊದಲು ಮಕ್ಕಳೆದರು ತಾವು ಆದರ್ಶವಾಗಿ ನಡೆದುಕೊಳ್ಳಿ ಅದನ್ನು ಮಕ್ಕಳು ಅನುಸರಿಸುತ್ತಾರೆ ಎಂದು ಹೇಳಿದರು.

ಹೆಣ್ಣು ಮಕ್ಕಳಿಗಾಗಿ ಒಂದು ವಸತಿ ನಿಲಯ ಪ್ರಾರಂಭಿಸುವುದರೊಂದಿಗೆ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಬೆಳೆಯಲಿ ಕಲ್ಯಾಣ ಕರ್ನಾಟಕದಲ್ಲಿ ಎರಡನೇ ಸಿದ್ದಗಂಗಾ ಕ್ಷೇತ್ರವಾಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಗಳನಾಗಾವಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಪ್ರವಚನಗಳಿಂದ ಜೀವನದಲ್ಲಿ ಪರಿವರ್ತನೆ ಆಗುತ್ತದೆ. ಉತ್ತಮ ವಿಚಾರಗಳ ಆಲಿಸುವಿಕೆ, ಉತ್ತಮರ ಸಂಘದಿಂದ ಜೀವನವನ್ನು ಬದಲಿಸಿಕೊಳ್ಳಬಹುದು ಆದ್ದರಿಂದ ಜನರು ಹೆಚ್ಚು ಹೆಚ್ಚು ಧರ್ಮದ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾವೂರ ಶ್ರೀ ಸಿದ್ದಲಿoಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯಸಾನಿದ್ಯ ವಹಿಸಿದ್ದರು. ವೇದಿಕೆಯ ಮೇಲೆ ಶರಣ ಸಂಸ್ಥಾನದ ಒಂಬತ್ತನೆಯ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಡಾ. ಅಲ್ಲಮಪ್ರಭು ದೇಶಮುಖ, ಎಸಿಸಿ ಅದಾನಿ ಕoಪನಿಯ ಸಿ.ಎಂ.ಓ ಪರಾಗ್ ಶ್ರೀವಾಸ್ತವ, ಎಚ್.ಆರ್ ವಿಭಾಗದ ಮುಖ್ಯಸ್ಥ ಕೋಟೇಶ್ವರಾವ್, ಉದ್ಯಮಿ ನರೇಂದ್ರ ಸೆಟ್ ಇದ್ದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೆದ, ಚೆನ್ನಣ್ಣ ಬಾಳಿ, ಗುರುನಾಥ ಗುದಗಲ್, ಸತೀಶ್ ಸಗರ, ತಿಪ್ಪಣ್ಣ ವಗ್ಗರ್, ಮೋಹನ ಸೂರೆ, ಈಶ್ವರ ಬಾಳಿ, ಚೆನ್ನಪ್ಪ ಆಳ್ಳೊಳ್ಳಿ, ರಾಮಚಂದ್ರ ರಾಠೋಡ, ಸಿದ್ದಲಿಂಗ ಬಾಳಿ, ಸಿದ್ದಲಿಂಗ ಜ್ಯೋತಿ, ಭೀಮರಾವ ಪಾಟೀಲ್, ಮಹೇಶ ಬಾಳಿ ಸೇರಿದಂತೆ ರಾವೂರ ಶಾಖಾ ಮಠಗಳ ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚೆನ್ನಯ್ಯಸ್ವಾಮಿ ಬೆನಕನಹಳ್ಳಿ ನಿರೂಪಿಸಿದರು. ಶರಣು ಜ್ಯೋತಿ ವಂದಿಸಿದರು.

Leave a Reply

Your email address will not be published. Required fields are marked *