ಶಹಾಬಾದ್: ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಸ್ಥಾನಕ್ಕೆ ತೀವ್ರ ಪೈಪೋಟಿ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿವಿಧ ಸಮುದಾಯಗಳ ಮುಖಂಡರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ದಸರಾ ಹಬ್ಬದ ಬಳಿಕ ಪಕ್ಷದ ವೀಕ್ಷಕರು ಭೇಟಿ ನೀಡಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನಲ್ಲಿ ಸಂಘಟನಾತ್ಮಕ ಬದಲಾವಣೆಗಳ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಬಳಿಕ ಬ್ಲಾಕ್ ಮಟ್ಟದಲ್ಲೂ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಕೆಪಿಸಿಸಿ ನಿರ್ಧಾರದಂತೆ 40ರಿಂದ 60 ವರ್ಷದೊಳಗಿನವರಿಗೆ ಅಧ್ಯಕ್ಷ ಸ್ಥಾನ ನೀಡಬೇಕಿರುವುದರಿಂದ ಯುವ ಮುಖಂಡರಲ್ಲಿ ಆಕಾಂಕ್ಷೆ ಹೆಚ್ಚಿದೆ.

ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕಾಡಾ ಅಧ್ಯಕ್ಷ ಡಾ. ಎಂ.ಎ ರಶೀದ ಅವರ ಸ್ಥಾನಕ್ಕೆ ಹೊಸಬರ ಆಯ್ಕೆ ನಡೆಯಲಿದೆ. ಲಿಂಗಾಯತ ಸಮುದಾಯದಿಂದ ಮಾಣಿಕಗೌಡ ಪಾಟೀಲ, ಅಲ್ಪಸಂಖ್ಯಾತರ ಪರವಾಗಿ ಹಾಶಮ್ ಖಾನ್ ಮತ್ತು ದಲಿತ ಸಮುದಾಯದಿಂದ ಬಂಜಾರ ಸಮಾಜದ ಕುಮಾರ ಚವ್ಹಾಣ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಡಾ. ಜಹೀರ್, ಜಹೀರ ಪಟವೇಗಾರ ಮತ್ತು ಮೃತ್ಯುಂಜಯ ಸ್ವಾಮಿ ಕೂಡ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ವಯೋಮಿತಿ ಕೆಲವರ ಆಯ್ಕೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಅವಧಿಗೆ ಅಧ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ತಾಲೂಕಿನ ಕಾಂಗ್ರೆಸ್ ಮುಖಂಡರಿಂದ ವ್ಯಕ್ತವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ, ಡಾ. ಎಂ.ಎ ರಶೀದ ಮತ್ತು ಹಿರಿಯ ಮುಖಂಡ ಶಿವಾನಂದ ಪಾಟೀಲ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮಾಣಿಕಗೌಡ ಪಾಟೀಲ ಈ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವುದಾದರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಪ್ತರಾಗಿರುವ ಹಾಗೂ ಶಹಾಬಾದ್- ವಾಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಶಮ್ ಖಾನ್ ಅವರಿಗೆ ಸ್ಥಾನ ನೀಡಬೇಕು ಎಂಬ ಒತ್ತಾಯವೂ ಇದೆ. ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದರೆ ಕುಮಾರ ಚವ್ಹಾಣ ಅವರಿಗೆ ಅವಕಾಶ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪಕ್ಷದೊಳಗಿನ ವಿವಿಧ ಬಣಗಳು ತಮ್ಮ ಬೆಂಬಲಿಗರಿಗೆ ಸ್ಥಾನ ಕೊಡಿಸಲು ಪ್ರಯತ್ನಿಸುತ್ತಿದ್ದು, ಅಂತಿಮವಾಗಿ ಹಿರಿಯ ಮುಖಂಡರಾದ ಶಿವಾನಂದ ಪಾಟೀಲ ಮತ್ತು ಡಾ. ಎಂ.ಎ ರಶೀದ ಅವರ ನಿಲುವು ಆಯ್ಕೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *