ಸುದ್ದಿ ಸಂಗ್ರಹ ಬೆಂಗಳೂರು
ಮಾತೃ ಸ್ವರೂಪಿ ಚೆನ್ನಮ್ಮ ದೇವೆಗೌಡ ಅವರ ನಿಧನಕ್ಕೆ ಸಿಎಂ ಡಿ.ಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದರು.
ಅಪಾರ ಧೈವಭಕ್ತೆಯಾಗಿದ್ದ ಚನ್ನಮ್ಮನವರು ಕುಟುಂಬವನ್ನು ಸಾಕಿ ಸಲಹಿದ ಮಹಾನ್ ತಾಯಿ. ದೇವೆಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬ ಸದಸ್ಯರ ರಾಜಕೀಯ ಮತ್ತು ಬದುಕಿನ ಏಳ್ಗೆಯ ಹಿಂದೆ ಚನ್ನಮ್ಮನವರ ಪರಿಶ್ರಮ ಅಡಗಿದೆ. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ ಬರುತ್ತಾರೆ ಎಂದು ಎಲ್ಲರೂ ನಂಬಿಕೆ ಇಟ್ಟಿದ್ದರು. ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ ಎಂದು ದುಃಖತಪ್ತರಾದರು.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೆ ಇರುತ್ತಾಳೆ ಎನ್ನುತ್ತಾರೆ. ದೇವೆಗೌಡರ ಪ್ರತಿ ಯಶಸ್ಸಿನ ಹಿಂದೆ ನಿಂತಿದ್ದವರು. ಅವರ ಕುಟುಂಬ ಸದಸ್ಯರು ಸೋತಾಗ ಕುಗ್ಗಲಿಲ್ಲ, ಗೆದ್ದಾಗ ಹಿಗ್ಗಲಿಲ್ಲ. ರಾಜಕೀಯದ ಏಳು-ಬೀಳುಗಳಲ್ಲಿ ದೇವೆಗೌಡರಿಗೆ ಬೆನ್ನೆಲುಬಾಗಿ ನಿಂತವರು ಚೆನ್ನಮ್ಮ. ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಮೌನದಿಂದಲೆ ಇಡಿ ಕುಟುಂಬದ ನಿರ್ವಹಣೆ ಮಾಡಿದವರು. ಯಾವುದೆ ಪ್ರಚಾರ ಬಯಸದೆ, ತೆರೆಮರೆಯಲ್ಲಿ ಇದ್ದವರು ಎಂದು ಸ್ಮರಿಸಿದರು.
ಇಳಿ ವಯಸ್ಸಿನಲ್ಲಿ ಪತ್ನಿಯ ಅಗಲಿಕೆ ದೇವೆಗೌಡರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ನೋವು ತರುವುದರ ಜತೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೆನೆ. ಅವರ ಕುಟುಂಬವರ್ಗ, ಬಂಧುಗಳು ಮತ್ತು ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದು ಸಿಎಂ ತಿಳಿಸಿದ್ದಾರೆ.