ಕಲಬುರಗಿ: ಶಕುಂತಲಾ ದೇವಿಯವರನ್ನು ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಕ್ಯಾಲ್ಕುಲೇಟರ್‌ಗಿಂತ ವೇಗವಾಗಿ ಪರಿಹರಿಸುವ ಸಾಮರ್ಥ್ಯದಿಂದಾಗಿ ಮಾನವ ಕಂಪ್ಯೂಟರ್ ಎಂದು ಕರೆಯಲಾಗಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದವರು. ಶಕುಂತಲಾ ದೇವಿಯವರು ನಮ್ಮ ನಾಡು, ದೇಶದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಮಾನವ ಕಂಪ್ಯೂಟರ್ ಶಕುಂತಲಾ ದೇವಿಯವರ 96ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಕುಂತಲಾ ದೇವಿ ಅವರು ಗಣಿತ, ಜ್ಯೋತಿಷ್ಯ ಮತ್ತು ಒಗಟುಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಗಣಿತದ ಜ್ಞಾನ ಇತರರಿಗೆ ಹಂಚಲು ಮತ್ತು ಪ್ರೇರೇಪಿಸಲು ಅವರು ದೇಶಾದ್ಯಂತ ಪ್ರವಾಸ ಮಾಡಿ ಜನಜಾಗೃತಿ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್ ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಮತ್ತು ವಿದ್ಯಾರ್ಥಿಗಳು ಇದ್ದರು.