ಜಾವಗಲ್ ಶ್ರೀನಾಥ್ ಸರಳತೆಗೆ ಸಲಾಂ ಹೊಡೆದ ನೆಟ್ಟಿಗರು

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಭಾರತದಲ್ಲಿ ಕ್ರಿಕೆಟ್​ಗೆ ಹಾಗೂ ಕ್ರಿಕೆಟಿಗರಿಗೆ ಸಿಗುವಷ್ಟು ಮನ್ನಣೆ ಬೇರೆ ಯಾವುದೆ ಕ್ರೀಡೆಯ ಜನಪ್ರಿಯ ವ್ಯಕ್ತಿಗೂ ಸಿಗುವುದಿಲ್ಲ. ಕ್ರಿಕೆಟಿಗರು ಯಾವುದಾದರೂ ಸಮಾರಂಭಕ್ಕೆ ಬರುತ್ತಾರೆ ಎಂದರೆ ಅಲ್ಲಿ ಜನಜಂಗುಳಿಯೇ ಸೇರಿರುತ್ತೆ. ಹೀಗಿರುವಾಗ ಕ್ರಿಕೆಟಿಗರು ಸಾಮಾನ್ಯ ಪ್ರಜೆಯಂತೆ ಒಬ್ಬೊಂಟಿಯಾಗಿ ಎಲ್ಲಿಯೂ ತಿರುಗುವ ವ್ಯವಸ್ಥೆ ಭಾರತದಲಿಲ್ಲ. ಇದೆ ಕಾರಣ ನೀಡಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತವನ್ನು ತೊರೆದು ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಕೆಲವು ಮಾಜಿ ಕ್ರಿಕೆಟಿಗರು ತಮ್ಮ ಜನಪ್ರಿಯತೆ, ಮನ್ನಣೆ ಇವೆಲ್ಲವನ್ನು ಬದಿಗಿಟ್ಟು ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರಳ ಜೀವನ ನಡೆಸುತ್ತಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡ ಒಬ್ಬರಾಗಿದ್ದಾರೆ.

ಮೈಸೂರು ಎಕ್ಸ್​ಪ್ರೆಸ್ ಜಾವಗಲ್ ಶ್ರೀನಾಥ್
ಮೈಸೂರು ಎಕ್ಸ್​ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ಜಾವಗಲ್ ಶ್ರೀನಾಥ್ ಚಿರಪರಿಚಿತರು. ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿ ತಂಡದ ಬ್ಯಾಟರ್​ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಶ್ರೀನಾಥ್ 1991 ರಿಂದ 2003 ರವರೆಗೆ ಅಂದರೆ ಸರಿಸುಮಾರು 12 ವರ್ಷಗಳ ಕಾಲ ಭಾರತ ಕ್ರಿಕೆಟ್​ನಲ್ಲಿ ತನ್ನದೆ ಛಾಪು ಮೂಡಿಸಿದ್ದ ಶ್ರೀನಾಥ್ ತಂಡದ ಪರ ಹಲವು ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಾರೆ. ಅಂತಹ ಶ್ರೀನಾಥ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಪ್ರಸ್ತುತ ಐಸಿಸಿ ಪಂದ್ಯಾವಳಿಗಳಲ್ಲಿ ಮ್ಯಾಚ್ ರೆಫರಿಯಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.

ಮೆಟ್ರೋದಲ್ಲಿ ಪ್ರಯಾಣ
ಈಗ ಅದೆ ಜಾವಗಲ್ ಶ್ರೀನಾಥ್ ಸರ್ವೆ ಸಾಮಾನ್ಯ ಪ್ರಜೆಯಂತೆ ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ನೀಲಿ ಜೀನ್ಸ್ ಮತ್ತು ಆಕಾಶ ನೀಲಿ ಶರ್ಟ್ ಧರಿಸಿ, ಕೈಯಲ್ಲಿ ಟ್ರಾಲಿ ಬ್ಯಾಗ್ ಹಿಡಿದು ಮೆಟ್ರೋ ಕೋಚ್‌ನಲ್ಲಿ ಶಾಂತವಾಗಿ ನಿಂತಿರುವ ಜಾವಗಲ್ ಶ್ರೀನಾಥ್ ಅವರ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. 90ರ ದಶಕದಲ್ಲಿ ತಮ್ಮ ಘಾತುಕ ವೇಗದ ಮೂಲಕ ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಬೆವರಿಳಿಸುತ್ತಿದ್ದ ಶ್ರೀನಾಥ್, ಇಷ್ಟು ಸರಳ ಜೀವನ ನಡೆಸುತ್ತಿರುವುದನ್ನು ಯಾರಿಗೂ ಊಹಿಸಲು ಅಸಾಧ್ಯ.

Leave a Reply

Your email address will not be published. Required fields are marked *