ಕಲಬುರಗಿ: ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ 1.79 ಕೋಟಿ ವಂಚನೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಇಲ್ಲಿನ ಎನ್‌ಜಿಒ ಕಾಲೊನಿಯ ನಿವಾಸಿ, ಎಚ್‌ಕೆಇ ಸೊಸೈಟಿಯ ಹೋಮಿಯೊಪಥಿಕ್‌ ಮೆಡಿಕಲ್‌ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಪ್ರೊ.ಅಶೋಕ ಪಾಟೀಲ ಅವರಿಗೆ ಮನಿ ಲಾಂಡ್ರಿಂಗ್‌ ಮತ್ತು ಉಗ್ರಗಾಮಿಗಳಿಗೆ ಧನಸಹಾಯ ಮಾಡಲಾಗಿದೆ ಎಂದು ಬೆದರಿಸಿ ಡಿಜಿಟಲ್‌ ಅರೆಸ್ಟ್‌ ಮಾಡಿದ ಸೈಬರ್‌ ವಂಚಕರು, ಬರೋಬ್ಬರಿ 1.79 ಕೋಟಿ ವಂಚಿಸಿದ್ದಾರೆ.

ಮುಂಬೈನ ಸಂದೀಪರಾವ್‌, ವಿಶ್ವಾಸರಾವ, ಅನೀಲಕುಮಾರ, ಅಮನ್‌ಕುಮಾರ ಶರ್ಮಾ ಅವರ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಜುಲೈ 14ರಂದು ಮುಂಬೈನ ಡಾಟಾ ಕಂಟ್ರೋಲಿಂಗ್‌ ಬೋರ್ಡ್‌ ಆಫ್‌ ಇಂಡಿಯಾ ಸೀನಿಯರ್‌ ಎಕ್ಸಿಕ್ಯೂಟ್‌ ಆಫೀಸ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ ಅಮನಕುಮಾರ ಶರ್ಮಾ, ಮುಂಬೈನಲ್ಲಿ ರಿಜಿಸ್ಟರ್‌ ಆಗಿರುವ ನಿಮ್ಮ ಮೊಬೈಲ್‌ ಸಂಖ್ಯೆಯೊಂದರಿಂದ ಕಾನೂನುಬಾಹಿರ ಜಾಹೀರಾತು, ಕಿರುಕುಳ ಸಂದೇಶ ಮತ್ತು ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಬ್ಬ ಹೆಣ್ಣುಮಗಳು ಮುಂಬೈನ ಕೋಲಾಬಾ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ ಎಂದು ಹೆದರಿಸಿದ್ದಾನೆ.

ಬಳಿಕ ಕೋಲಾಬಾ ಪೊಲೀಸ್‌ ಠಾಣೆಯಿಂದ ಸಬ್‌ ಇನ್‌ಸ್ಪೆಕ್ಟರ್‌ ಎಂದು ವಾಟ್ಸ್‌ಆ್ಯಪ್‌ ಕರೆ ಮಾಡಿದ ಸಂದೀಪರಾವ್‌, ನಿಮ್ಮ ಆಧಾರ್‌ ಸಂಖ್ಯೆ ಮೂಲಕ ಬ್ಯಾಂಕ್‌ ಖಾತೆಯನ್ನು ಮನಿ ಲಾಂಡ್ರಿಂಗ್‌ ಮತ್ತು ಪಿಎಫ್‌ಐ ಉಗ್ರಗಾಮಿಗಳಿಗೆ 2.5 ಕೋಟಿ ಧನಸಹಾಯ ಮಾಡಲು ಬಳಸಲಾಗಿದೆ. ಪಿಎಫ್‌ಐ ಉಗ್ರಗಾಮಿ ಸಂಘಟನೆಯ ಚೇರ್ಮನ್‌ ಅಬ್ದುಲ್‌ ಸಲಾಮ್‌ ನಿಮ್ಮ ಹೆಸರಿಗೆ ಇರುವ ಬ್ಯಾಂಕ್‌ ಖಾತೆಯನ್ನು ಬಳಕೆ ಮಾಡಲು ನಿಮಗೆ ಶೇ 10ರಂತೆ ಅಂದಾಜು 20 ಲಕ್ಷ ಬಂದಿದೆಯೆ ? ಎಂದು ವಿಚಾರಿಸಿದ್ದಾನೆ.

ನಂತರ ವಿಶ್ವಾಸರಾವ ಹಾಗೂ ಅನೀಲಕುಮಾರ ಎನ್ನುವವರು ಕರೆ ಮಾಡಿ, ಸುಪ್ರೀಂ ಕೋರ್ಟ್‌ ಹಾಗೂ ಇ.ಡಿ ಸಂಬಂಧಿಸಿದ ಲೆಟರ್‌ಗಳೆಂದು ಹೆಸರು ಉಲ್ಲೇಖಿಸಿ ತನಿಖೆಗೆ ಸಹಕರಿಸುವಂತೆ ಹೇಳಿದ್ದಾರೆ. ಜೊತೆಗೆ ಬ್ಯಾಂಕ್‌ ಖಾತೆಗಳ ವಿವರ, ಎಫ್‌ಡಿ, ಸೇವಿಂಗ್ಸ್‌, ಎಲ್‌ಐಸಿ, ಆಸ್ತಿ ಮತ್ತು ಚಿನ್ನದ ವಿವರಗಳನ್ನು ಪಡೆದಿದ್ದಾರೆ. ಜೊತೆಗೆ ಈ ತನಿಖೆಯ ಬಗ್ಗೆ ಯಾರಿಗೂ ಹೇಳದಂತೆ ವಾಟ್ಸ್‌ಆ್ಯಪ್‌ ಮೂಲಕ ಪತ್ರ ಬರೆಸಿಕೊಂಡಿದ್ದಾರೆ.

ವಂಚಕರ ಸೂಚನೆಯಂತೆ ಪ್ರೊ.ಅಶೋಕ ಪಾಟೀಲ ಬ್ಯಾಂಕ್ ಖಾತೆಯಲ್ಲಿದ್ದ 6.40 ಲಕ್ಷ ಆರ್‌ಟಿಜಿಎಸ್‌ ವರ್ಗಾವಣೆ ಮಾಡಿದ್ದಾರೆ. ಬಳಿಕ ಎಲ್‌ಐಸಿ ಬಾಂಡ್‌ ಸರೆಂಡರ್‌ ಮಾಡಿ 19.28 ಲಕ್ಷ, ಅವರ ಹೆಂಡತಿ ಹೆಸರಲ್ಲಿದ್ದ ಎಸ್‌ಬಿಐ ಲೈಫ್‌ ಇನ್ಸುರೆನ್ಸ್‌–4 ಬಾಂಡ್‌ನ, ಅಂಚೆ ಕಚೇರಿ ಎಫ್‌ಡಿ ಮತ್ತು ಇಬ್ಬರ ಹೆಸರಲ್ಲಿದ್ದ ಎಲ್‌ಐಸಿ ಬಾಂಡ್‌ನ 32.30 ಲಕ್ಷವನ್ನು ವರ್ಗಾಯಿಸಿದ್ದಾರೆ. ಬಂಗಾರ ಅಡವಿಟ್ಟು ಬಂದ ಹಣ ಸೇರಿ 58.30 ಲಕ್ಷ ಮತ್ತು 12.80 ಲಕ್ಷ ಜಮಾ ಮಾಡಿದ್ದಾರೆ. ಸ್ವಂತ ಮನೆ ಅಡವಿಟ್ಟು ಪಡೆದ ಸಾಲದ 50.20 ಲಕ್ಷವನ್ನು ಸಹ ಆರ್‌ಟಿಜಿಎಸ್‌ ಮೂಲಕ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಂಬೈ ಪೊಲೀಸರು, ಇ.ಡಿ, ಎನ್‌ಐಎ ಅಧಿಕಾರಿಗಳೆಂದು ಒಟ್ಟು 1.79 ಕೋಟಿಯನ್ನು ಜುಲೈ 15ರಿಂದ ಆಗಸ್ಟ್‌ 17ರವರೆಗೆ ಹಂತಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ. ಪ್ರೊ.ಅಶೋಕ ಅವರ ಪತ್ನಿಯ ಖಾತೆಯಿಂದ ಹಣ ವರ್ಗಾವಣೆಯಾದಾಗ ಪುತ್ರನಿಗೆ ಅನುಮಾನ ಬಂದು ಕೇಳಿದ್ದು, ಮೋಸ ಹೋಗಿರುವುದು ಗೊತ್ತಾಗಿದೆ.

Leave a Reply

Your email address will not be published. Required fields are marked *