ಕಲಬುರಗಿ: ಕಣ್ಣು ಮಾನವನ ಅಮೂಲ್ಯ ಅಂಗವಾಗಿದ್ದು, ಎಲ್ಲರು ಕಣ್ಣಿನ ಆರೋಗ್ಯ ಬಗ್ಗೆ ಕಾಳಜಿ, ಮುಂಜಾಗ್ರತೆ ವಹಿಸಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ನೇತ್ರಾಧಿಕಾರಿ ಡಾ.ದಸ್ತಗಿರ್ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಜ್ಯೋತಿ ಐ ಕೇರ್ ಕಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಜರುಗಿದ “ನೇತ್ರ ಮಾಸಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ ಹೆಚ್ಚಾಗಿರುವುದರಿಂದ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆ ಹೆಚ್ಚಾಗುತ್ತಿದೆ ಎಂದರು.
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕಾಂಶವುಳ್ಳ ಸಮತೋಲಿತ ಆಹಾರ, ನಿಯಮಿತ ಕಣ್ಣಿನ ಪರೀಕ್ಷೆ, ಪ್ರತಿ 20 ನಿಮಿಷಗಳಿಗೊಮ್ಮೆ ಕಣ್ಣಿಗೆ ಸ್ವಲ್ಪ ವಿಶ್ರಾಂತಿ, ಧೂಮಪಾನ ತ್ಯಜಿಸುವುದು, ಕಣ್ಣಿನ ಸುರಕ್ಷಾ ಕ್ರಮ ಅಳವಡಿಸಿಕೊಳ್ಳುವುದು, ವಿಟಾಮಿನ್-ಎ ಸೇವನೆ, ಕಣ್ಣಿನ ಸ್ವಚ್ಚತೆ ಕಾಪಾಡುವುದು ಸೇರಿದಂತೆ ಮುಂತಾದ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಸಲಹೆ-ಸೂಚನೆಗಗಳು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್, ಅಕ್ಟೋಬರ್ ತಿಂಗಳು ಎಂದರೆ, ‘ನೇತ್ರ ತಿಂಗಳು’ ಆಗಿದೆ. ಏಕೆಂದರೆ, ಇದೆ ತಿಂಗಳಿನಲ್ಲಿ ‘ವಿಶ್ವ ದೃಷ್ಟಿ ದಿನ’, ‘ಕುರುಡುತನ ತಡೆಯುವ ದಿನ’, ‘ದೃಷ್ಟಿ ಆರೋಗ್ಯ ಜಾಗೃತಿ ದಿನ’, ‘ನೇತ್ರ ಗಾಯ ಮುಂಜಾಗ್ರತೆ ದಿನ’, ‘ನೇತ್ರ ಸಂರಕ್ಷಣೆ ದಿನ’ಗಳಿವೆ. ಇವೆಲ್ಲವುಗಳನ್ನು ಪರಿಗಣಿಸಿ, ಅಕ್ಟೋಬರ್ ತಿಂಗಳು ‘ನೇತ್ರ ತಿಂಗಳು’ ಎಂದು ‘ನೇತ್ರ ಮಾಸಾಚರಣೆ’ಯನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕ್ಲಿನಿಕ್‌ನ ಮುಖ್ಯಸ್ಥ ಅಮರ ತಡಕಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮೊಹಮ್ಮದ್ ಕೈಫ್ ಸೇರಿದಂತೆ ಅನೇಕರು ಇದ್ದರು.