ಸುದ್ದಿ ಸಂಗ್ರಹ ಶಹಾಬಾದ
ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯಡಿ ಕಡಿಮೆ ಮಕ್ಕಳ ಸಂಖ್ಯೆಯಿರುವ ಶಾಲೆಗಳನ್ನು ವಿಲೀನ ಮಾಡಿ ಸರಿಸುಮಾರು 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚುವ ಹುನ್ನಾರ ಅಡಗಿದೆ. ಇಂತಹ ಜನವಿರೋಧಿ, ಶಿಕ್ಷಣ ವಿರೋಧಿ ನೀತಿ ಈ ಕೂಡಲೆ ಕೈಬಿಡಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಸಮಿತಿಯ ಉಪಾಧ್ಯಾಕ್ಷ ವಿ.ಎನ್ ರಾಜಶೇಖರ ಹೇಳಿದರು.
ನಗರದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಜನಪರ ಶಿಕ್ಷಣ ನೀತಿಗಾಗಿ ಜರುಗಿದ ಶೈಕ್ಷಣಿಕ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಗ್ರಾಮೀಣ ಅಥವಾ ನಗರ ಪ್ರದೇಶದ ಬಡಾವಣೆಯ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾದರೆ 1 ರಿಂದ 5 ಕಿ.ಮೀ ದೂರದ ಕೆಪಿಎಸ್ ಶಾಲೆಗಳಿಗೆ ವಿಲೀನ ಮಾಡಲು ಸರಕಾರ ಆದೇಶ ಮಾಡಲಾಗಿದೆ. ಇದರಿಂದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಾವಿರಾರು ಶಿಕ್ಷಕರ ಹುದ್ದೆಗಳು ರದ್ದಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ನೀತಿಯ ವಿರುದ್ಧ ಪೋಷಕರು ಬಲಿಷ್ಠವಾದ ಜನಾಂದೋಲನ ಮಾಡಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಕಾರ್ಯದರ್ಶಿ ಮಹೇಶ ಎಸ್.ಜಿ ಮಾತನಾಡಿ, ಶಿಕ್ಷಣದ ಅಸಮಾನತೆ ಹಾಗೂ ಖಾಸಗೀಕರಣಕ್ಕೆ ಒತ್ತು ಕೊಟ್ಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಐಎಸ್’ಇಸಿ ವಿರೋಧಿಸುತ್ತದೆ, ದೇಶಕ್ಕೆ ಅವಶ್ಯಕವಿರುವ ಶಿಕ್ಷಣ ನೀತಿಗಾಗಿ ಕರಡು ಶಿಕ್ಷಣ ನೀತಿ ಪ್ರಖಾತ್ಯ ಶಿಕ್ಷಣ ತಜ್ಞರಿಂದ ರಚಿಸಲಾಗಿದೆ. ಈ ನೀತಿಯ ಬಗ್ಗೆ ಜನವರಿ 24 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಂಸತ್ತಿನ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಚರ್ಚಿಸಿ ರಾಜ್ಯ ಸರಕಾರಗಳಿಗೆ ಸಲ್ಲಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಎಸ್ಇಸಿ ಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಎಸ್ ಇಬ್ರಾಹಿಂಪೂರ ಮಾತನಾಡಿ, ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಅದನ್ನು ಕಸಿದುಕೊಳ್ಳುವ ನೀತಿಯನ್ನು ನಮ್ಮ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ದೇಶದ ಪ್ರತಿಯೊಬ್ಬ ಮಗುವಿಗೆ ಯಾವುದೆ ಬೇಧಬಾವವಿಲ್ಲದೆ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣವನ್ನು ಸರಕಾರ ಖಾತ್ರಿ ಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು-ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಐಎಸ್’ಇಸಿಯ ಸಂಘಟನಾಕರರಾದ ಜಿ.ಎಮ್ ಪ್ರಸನ್ನ, ಪಲ್ಲವಿ ನಿರೂಪಿಸಿದರು.