ಬ್ರೈನ್ ಟ್ಯೂಮರ್ ಎಂಬ ಪದವೆ ಭಯ ಮತ್ತು ಆತಂಕ ಹುಟ್ಟಿಸುತ್ತದೆ. ಇದರ ಬಗ್ಗೆ ಹೇಳುವುದೆ ಬೇಡ ಏಕೆಂದರೆ ಇದೊಂದು ಗಂಭೀರ ಕಾಯಿಲೆ ಎಂಬುದು ಎಲ್ಲರಿಗೂ ಸರ್ವೆ ಸಾಮಾನ್ಯವಾಗಿ ತಿಳಿದಿರುತ್ತದೆ. ಆದರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಇರುವ ವಿಷಯಕ್ಕಿಂತ ಇಲ್ಲದಿರುವ ಸುಳ್ಳು ಸುದ್ದಿಗಳೇ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಜನ ಯಾವುದನ್ನೂ ನಂಬಬೇಕು ಮತ್ತು ಯಾವುದು ಸುಳ್ಳು ಎಂಬುದರ ನಡುವೆ ಗೊಂದಲದಲ್ಲಿ ಇರುತ್ತಾರೆ. ಅಂತವುಗಳಲ್ಲಿ ಬ್ರೈನ್ ಟ್ಯೂಮರ್ಗೆ ಶಸ್ತ್ರಚಿಕಿತ್ಸೆಯೇ ಮದ್ದು ಎಂಬ ಮಾತು ಕೂಡ ಒಂದು. ಹಾಗಾದರೆ ಬ್ರೈನ್ ಟ್ಯೂಮರ್ ಎಂಬ ಗಂಭೀರ ಕಾಯಿಲೆಯಿಂದ ಮುಕ್ತಿ ಪಡೆಯಲು ಚಿಕಿತ್ಸೆ ಮಾತ್ರ ಪರಿಹಾರವೇ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂದು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಜ್ಞರು ಹೇಳುವುದೇನು ?
ನ್ಯೂರೋ ಸರ್ಜನ್ ಡಾ. ಪ್ರವೀಣ್ ಗುಪ್ತಾ ಅವರು ಹೇಳುವ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಚಿಕಿತ್ಸೆ ಒಂದೆ ರೀತಿಯಲ್ಲಿರದು. ಕೆಲವು ಸಣ್ಣ ಹಾಗೂ ನಿಧಾನವಾಗಿ ಬೆಳೆಯುವ ಟ್ಯೂಮರ್ಗಳು ವರ್ಷಗಳ ಕಾಲ ಯಾವುದೆ ದೊಡ್ಡ ಸಮಸ್ಯೆ ಉಂಟುಮಾಡದೆ ಸ್ಥಿರವಾಗಿರಬಹುದು. ಅಂತಹ ಸಂದರ್ಭಗಳಲ್ಲಿ ನಿಯಮಿತ ಎಂ-ಆರ್-ಐ ಸ್ಕ್ಯಾನ್ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಸಾಕಾಗಬಹುದು. ಜೊತೆಗೆ ಪ್ರತಿಯೊಂದು ಬ್ರೈನ್ ಟ್ಯೂಮರ್ಗೂ ಆಪರೇಷನ್ ಅಗತ್ಯವಿಲ್ಲ. ಟ್ಯೂಮರ್ನ ಗಾತ್ರ, ಅದು ಇರುವ ಸ್ಥಳ, ಅದರ ಸ್ವಭಾವ ಹಾಗೂ ರೋಗಿಯ ಆರೋಗ್ಯ ಸ್ಥಿತಿಯನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವು ಬಿನೈನ್ (ಕ್ಯಾನ್ಸರ್ ಅಲ್ಲದ) ಟ್ಯೂಮರ್ಗಳು ಮೆದುಳಿನ ಸಂವೇದನಾಶೀಲ ಭಾಗಗಳಿಂದ ದೂರವಿದ್ದರೆ ಮತ್ತು ಯಾವುದೇ ಲಕ್ಷಣಗಳನ್ನು ಉಂಟುಮಾಡದಿದ್ದರೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ.
ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ?
ನಿರಂತರ ತಲೆನೋವು, ಸೆಳೆತ (ಸೀಜರ್ಸ್), ದೃಷ್ಟಿ ಸಮಸ್ಯೆ, ಮಾತನಾಡಲು ಕಷ್ಟವಾಗುವುದು, ದೇಹದ ಭಾಗದಲ್ಲಿ ದುರ್ಬಲತೆ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಇತ್ತೀಚಿನ ತಂತ್ರಜ್ಞಾನಗಳಾದ ಹೈ-ರಿಸೊಲ್ಯೂಶನ್ MRI, ನ್ಯೂರೋ ನ್ಯಾವಿಗೇಶನ್, ಫಂಕ್ಷನಲ್ ಬ್ರೇನ್ ಮ್ಯಾಪಿಂಗ್ ಮತ್ತು ಅವೇಕ್ ಕ್ರೇನಿಯೋಟಮಿ ಮುಂತಾದವು ಬ್ರೈನ್ ಟ್ಯೂಮರ್ ಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಮಾಡಿವೆ.
ಇಂಟರ್ನೆಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಅಪೂರ್ಣ ಮಾಹಿತಿಯನ್ನು ನಂಬಿ ಚಿಕಿತ್ಸೆ ಮಾಡಿಸುವ ಬಗ್ಗೆ ತೀರ್ಮಾನ ಮಾಡಬಾರದು. ಬ್ರೈನ್ ಟ್ಯೂಮರ್ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರಲ್ಲೂ ಅದರ ಸ್ಥಿತಿ ವಿಭಿನ್ನವಾಗಿರುತ್ತದೆ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ತಜ್ಞ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ. ಹಲವು ರೋಗಿಗಳು ಶಸ್ತ್ರಚಿಕಿತ್ಸೆಯಿಲ್ಲದೆ ಸಹ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಭಯಪಡದೆ ಜಾಗೃತಿಯಿಂದ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.