ಸುದ್ದಿ ಸಂಗ್ರಹ ನಾಲವಾರ
ಕಲಬುರಗಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ನಿಮಿತ್ಯ ಕಡಕೋಳದ ಮಡಿವಾಳೇಶ್ವರ ಪುರಾಣ ಪ್ರಾರಂಭೋತ್ಸವ, ಜಾತ್ರಾ ಮಹೋತ್ಸವದ ಭಿತ್ತಿ ಪತ್ರಗಳ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಚಾಲನಾ ಸಮಾರಂಭವು ಗುರುವಾರ ಅತ್ಯಂತ ಅದ್ಧೂರಿಯಾಗಿ ನೆರವೇರಿತು.
ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಕರಡಕಲ್ಲ ಕೋರಿಸಿದ್ಧೇಶ್ವರ ಶಾಖಾ ಮಠದ ಶಾಂತರುದ್ರಮುನಿ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ನಾಡಿನ ಪ್ರಖರ ಪ್ರವಚನಕಾರರೆಂದು ಪ್ರಖ್ಯಾತರಾದ ಸಿದ್ಧಬಸವಕಬೀರ ಮಹಾಸ್ವಾಮಿಗಳು ಮರುಳಶಂಕರ ಪೀಠ ಚಿಗರಹಳ್ಳಿ ಅವರು ತತ್ವಪದಕಾರ, ಶ್ರೇಷ್ಠ ಶರಣ ಕಡಕೋಳದ ಮಡಿವಾಳೇಶ್ವರರ ಪುರಾಣ ಪ್ರವಚನ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದ ಅವರು, ನಾಲವಾರ ಜಾತ್ರೆ ಕೇವಲ ಧಾರ್ಮಿಕ ಯಾತ್ರೆ ಮಾತ್ರವಾಗಿರದೆ, ಕಲೆ-ಸಾಹಿತ್ಯ-ಸಂಸ್ಕೃತಿಗಳ ಸಂಗಮವಾಗಿದ್ದು, ಇಡಿ ನಾಡು ನಾಲವಾರದ ಜಾತ್ರೆಯ ವಿಶೇಷತೆಯೇನು ಎಂಬುವದರ ಬಗ್ಗೆ ಪ್ರತಿವರ್ಷ ಕುತೂಹಲದಿಂದ ನೋಡಲಾಗುತ್ತದೆ. ಹತ್ತಾರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಇದೆ ತಿಂಗಳು 18-19 ರಂದು ತನ್ನ ವೈಭವವನ್ನು ತಲುಪುತ್ತದೆ. ಜಾತ್ರೆಯು ಮನುಷ್ಯರ ಮನಸ್ಸುಗಳು ಬೆಸೆಯುವ ಸಾಧನವಾಗಿದ್ದು, ಬೇಧ ಭಾವ ಮರೆತು ಎಲ್ಲರೂ ಒಟ್ಟಾಗಿ ಸಂಭ್ರಮಿಸುವ ಸಡಗರದ ಹಬ್ಬವೆಂದರೆ ನಾಲವಾರ ಜಾತ್ರೆಯಾಗಿದೆ ಎಂದು ಬಣ್ಣಿಸಿದರು.
ಜಾತ್ರಾ ಮಹೋತ್ಸವದ ಪ್ರಚಾರಕ್ಕೆ ವಿಶೇಷವಾಗಿ ರೂಪುಗೊಂಡ ಭಿತ್ತಿಪತ್ರಗಳನ್ನು ಪೂಜ್ಯರು ಬಿಡುಗಡೆ ಮಾಡಿದರು.
ಜನೆವರಿ 18 ರಂದು ಭಕ್ತರ ಹರಕೆಯ ತನಾರತಿ ಮಹೋತ್ಸವ ಹಾಗೂ 19 ರಂದು ಮಹಾರಥೋತ್ಸವ ಕಾರ್ಯಕ್ರಮಗಳು ಅತಿವೈಭವದಿಂದ ನಡೆಯಲಿವೆ. ನಾಡಿನ ಹರಗುರು ಚರಮೂರ್ತಿಗಳು ಹಾಗೂ ಗಣ್ಯರು ಭಾಗವಹಿಸುವ ನಾಲವಾರ ಜಾತ್ರೆಗೆ ನಾಡಿನ ಭಕ್ತಸಂಕುಲ ಆಗಮಿಸಬೇಕೆಂದು ಪೂಜ್ಯರು ಕರೆ ನೀಡಿದರು.
ವೇದಿಕೆಯ ಮೇಲೆ ಶ್ರೀಮಠದ ಸದ್ಭಕ್ತರಾದ ಸಂಗಾರೆಡ್ಡಿಗೌಡ ಮಲ್ಹಾರ ಯಾದಗಿರಿ, ವಿರುಪಾಕ್ಷಯ್ಯಸ್ವಾಮಿ, ಮಹಾದೇವ ಗಂವ್ಹಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗಾಯಕ ಸಿದ್ದಯ್ಯಸ್ವಾಮಿ ಪಡದಳ್ಳಿ ಸಂಗೀತ ಕಾಯಕ್ರಮ ನಡೆಸಿಕೊಟ್ಟರು….ಜಾತ್ರಾಮಹೋತ್ಸವಕ್ಕಾಗಿ ಹಲವಾರು ಭಕ್ತರು ಕಾಣಿಕೆ ಸಮರ್ಪಿಸಿ ಪೂಜ್ಯರಿಂದ ಆಶಿರ್ವಾದ ಪಡೆದರು.
ಶ್ರೀಮಠದ ಪ್ರಸಾದ ನಿಲಯದ ಮಕ್ಕಳು ಪ್ರಾರ್ಥಿಸಿದರು,
ಪೂಣಕುಂಭ ಹೊತ್ತ ನೂರಾರು ಮಹಿಳೆಯರೊಂದಿಗೆ ಪೂಜ್ಯರ ಹಾಗೂ ಪುರಾಣದ ಮೆರವಣಿಗೆ ಶ್ರೀಮಠಧ ಅಂಗಳದಲ್ಲಿ ಅದ್ಧೂರಿಯಾಗಿ ನಡೆಯಿತು.