ಚತ್ತಾಪುರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಜಗದೇವ ಗುತ್ತೆದಾರ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರಿಂದ ಖಾಲಿಯಾಗಲಿರುವ ಅಧ್ಯಕ್ಷ ಸ್ಥಾನಕ್ಕೆ ಕೋಲಿ ಸಮಾಜದ ಕಾಂಗ್ರೆಸ್ ಮುಖಂಡರನ್ನು ನೇಮಕ ಮಾಡಬೇಕು ಎಂದು ತಾಲೂಕು ಕೋಲಿ ಸಮಾಜದಿಂದ ಕೆಪಿಸಿಸಿ ಹಾಗೂ ಎಐಸಿಸಿ ಅಧ್ಯಕ್ಷರಿಗೆ ಆಗ್ರಹಿಸುತ್ತಿದ್ದೆವೆ ಎಂದು ತಾಲೂಕು ಕೋಲಿ ಸಮಾಜ ಅಧ್ಯಕ್ಷ ರಾಮಲಿಂಗ ಬಾನರ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೋಲಿ ಸಮಾಜದವರನ್ನು ನೇಮಕ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ತತ್ವ, ಸಿದ್ಧಾಂತ, ಪಕ್ಷನಿಷ್ಠೆಯಿಂದ ಪಕ್ಷದ ಸಂಘಟನೆಯಲ್ಲಿ ಸಕ್ರೀಯರಾಗಿರುವ ಮುಖಂಡರು, ಕಾರ್ಯಕರ್ತರನ್ನು ಗುರುತಿಸಿ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಬೇಕು. ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದೆವೆ.
ಜಿಲ್ಲೆಯಲ್ಲಿ ಬಹುಸಂಖ್ಯಾರಿರುವ ಕೋಲಿ ಸಮಾಜವನ್ನು ಕೇವಲ ಮತಬ್ಯಾಂಕ್ ದೃಷ್ಟಿಯಿಂದ ನೋಡದೆ ಸಮಾಜಕ್ಕೆ ಸಾಮಾಜಿಕ ನ್ಯಾಯ, ಸೂಕ್ತ ಸ್ಥಾನಮಾನ, ರಾಜಕೀಯ ಅಧಿಕಾರ ನೀಡಬೇಕು. ಜಗದೇವ ಗುತ್ತೆದಾರ ಅವರು ಹಿಂದುಳಿದ ವರ್ಗದವರೆಂದು ಹೇಳುವ ಮೂಲಕ ಹಿಂದುಳಿದ ಬೇರೆ ಜಾತಿಯವರನ್ನು ಪರಿಗಣಿಸಬೇಕು. ಲಿಂಗಾಯತ ಸಮುದಾಯದ ಚಂದ್ರಶೇಖರ ಪಾಟೀಲ್, ಡಿ.ಎಸ್ ಪಾಡೀಲ್, ಶಾಂತಮಲ್ಲಪ್ಪ ಪಾಟೀಲ್, ಸಿದ್ರಾಮಪ್ಪ ಐರೆಡ್ಡಿ, ಅಲ್ಲಮಪ್ರಭು ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್, ಭಾಗಣ್ಣಗೌಡ ಸಂಕನೂರು, ಕಲ್ಯಾಣ ರಾವ್ ಮರಗುತ್ತಿ, ಧರ್ಮರಾವ್ ಆಫಜಲಪುರಕರ್, ಧರ್ಮ ಸಿಂಗ್ ನೆಲೋಗಿ, ಶಿವಣ್ಣ ಶಹಾಪೂರ್, ಡಾ. ಜಿ ಸುಬ್ಬಯ್ಯ, ಇಕ್ಬಾಲ್ ಅಹ್ಮದ ಸರಡಿಗಿ, ಜಿ. ರಾಮಕೃಷ್ಣ, ಗುಂಡಪ್ಪ ಕೋರವಾರ, ಜಗದೇವ ಗುತ್ತೇದಾರ್ ಅವರು ಅಧ್ಯಕ್ಚರಾಗಿದ್ದಾರೆ. ಹೀಗಾಗಿ ಕೋಲಿ ಸಮಾಜಕ್ಕೆ ಮೊದಲ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸುತ್ತಿದ್ದೆವೆ.
ಜಿಲ್ಲೆಯಲ್ಲಿ ಕೋಲಿ ಸಮಾಜದ ಜನಪ್ರತಿನಿಧಿ ಇಲ್ಲದೆ ಸಮಾಜದ ಧ್ವನಿ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ತಲುಪಿಸಲು ಆಗುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ನಾಲ್ಕು ಟಿಕೆಟ್ ನೀಡಿ ನಾಲ್ವರು ಶಾಸಕರು ವಿಧಾನಸಭೆಗೆ ಕಳಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ಲಿಂಗಾಯತ ಸಮುದಾಯಕ್ಕೆ ಸಮಾನ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜಕ್ಕೆ ಅದೇ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ಅವಕಾಶ ನೀಡಬೇಕು ಎಂದು ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿದರೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ. ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಕೋಲಿ ಸಮಾಜದ ಮುಖಂಡರನ್ನು ಕೂಡಲೇ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೆವೆ.
ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಹಣಮಂತ ಸಂಕನೂರು, ನಗರ ಅಧ್ಯಕ್ಷಪ ಭೀಮಣ್ಣ ಹೋತಿನಮಡಿ, ಸಮಾಜದ ಕಾಂಗ್ರೆಸ್ ಪ್ರಮುಖರಾದ ನಿಂಗಣ್ಣ ಹೆಗಲೇರಿ, ಬಸವರಾಜ ಚಿನ್ನಮಳ್ಳಿ, ಕರಣಕುಮಾರ ಬೂನಿ, ಗುರುನಾಥ ರಾವೂರ, ನಾಗೇಂದ್ರ ಜೈಗಂಗಾ, ಮಲ್ಲಣ್ಣ ಮಾಲಗತ್ತಿ, ರಾಮು ಕಿರಾಣಿಗಿ, ಭೀಮರಾಯ ಅಂಬಾರ ಸೇರಿದಂತೆ ಇನ್ನಿತರಿದ್ದರು.