ಸುದ್ದಿ ಸಂಗ್ರಹ ಗದಗ
ಇಬ್ಬರು ಅಂತಾರಾಜ್ಯ ಗಾಂಜಾ ದಂಧೆಕೋರರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಪಡೆದು ದಾಳಿ ಮಾಡಿ ಬಂಧಿಸುವ ಮೂಲಕ ಗದಗ ಗ್ರಾಮೀಣ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ಗಡಾದ್ ನೇತೃತ್ವದ ತಂಡ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲ ಬೇಧಿಸಿದ್ದಾರೆ. ಬಂಧಿತರಿಂದ 1.17 ಲಕ್ಷ ರೂ ಮೌಲ್ಯದ 2 ಕೆ.ಜಿ 341 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ.
ನಾಲ್ವರ ಬಂಧನ
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಆಕಾಶ್ ಕಡೆಕರ (23) ಮತ್ತು ರವಿ ಕಡೆಕರ (20) ಗದಗ ನಗರಕ್ಕೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಮಂಜುನಾಥ್ (36) ಮತ್ತು ಭಾಷಾಸಾಬ್ (26) ಗದಗನಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಎಲ್ಲರನ್ನು ಬಂಧಿಸಲಾಗಿದೆ.
ಸೊಲ್ಲಾಪುರದಿಂದ ಆರೋಪಿಗಳು ಪೂರೈಕೆ ಮಾಡುತ್ತಿದ್ದ ಗಾಂಜಾವನ್ನು ಮಂಜುನಾಥ್ ಜಾಧವ ಸಣ್ಣ ಸಣ್ಣ ಪಾಕೆಟ್ ಮಾಡಿ ಭಾಷಾಸಾಬ್ಗೆ 200 ರೂ.ಗೆ ಮಾರಾಟ ಮಾಡುತ್ತಿದ್ದ. ಈ ಭಾಷಾಸಾಬ್ 300ರಿಂದ 400 ರೂ.ಗೆ ಮಾರಾಟ ಮಾಡುತ್ತಿದ್ದ. ಸದ್ಯ ಪೊಲೀಸರು ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ್ದಾರೆ.
ಗಾಂಜಾ ಮಾರಾಟ ಪ್ರಕರಣದಲ್ಲಿ ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ: 25 ಸಾವಿರ ರೂ.ದಂಡ
ಹುಬ್ಬಳ್ಳಿಯಲ್ಲಿ ಗಾಂಜಾ ಸಾಗಾಟ ಮತ್ತು ಅಕ್ರಮ ಮಾರಾಟ ಪ್ರಕರಣದಲ್ಲಿ ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಬಸವರಾಜ್ ಭಜಂತ್ರಿ, ಶಿವರಾಜ್ ಗಜಕೋಶ ಎಂಬುವರಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ.ದಂಡ ವಿಧಿಸಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2023ರಲ್ಲಿ 11,500 ರೂ. ಮೌಲ್ಯದ 1,154 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು.
1.1 ಕೋಟಿ ರೂ ಮೌಲ್ಯದ 500 ಗಾಂಜಾ ಗಿಡಗಳು ಜಪ್ತಿ: ಓರ್ವ ಅರೆಸ್ಟ್
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಬಳಿ ಜಮೀನಿನಲ್ಲಿ ಬೆಳೆದಿದ್ದ 1 ಕೋಟಿ 1 ಲಕ್ಷ 37 ಸಾವಿರ ರೂ ಮೌಲ್ಯದ 500 ಗಾಂಜಾ ಗಿಡಗಳನ್ನ ಸೀಜ್ ಮಾಡಲಾಗಿದೆ. ಜಮೀನಿನಲ್ಲಿ ತೊಗರಿ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ಶಿವಶಂಕರ್ ಜೀರ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣ ಭೇದಿಸಿದ ಬಸವನ ಬಾಗೇವಾಡಿ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.