ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳ ಪತ್ತೆಗೆ ಮನೆ ಮನೆ ಭೇಟಿ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ಜಮಾ ಆಗುತ್ತಿರುವ 2,000 ಸಹಾಯ ಧನವು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯಾದ್ಯಂತ ಅರ್ಹ ಫಲಾನುಭವಿಗಳ ಪತ್ತೆಗೆ ಮನೆ–ಮನೆಗೆ ಭೇಟಿ ಆರಂಭಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇಡಿಸಿಎಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ, ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣತಿದಾರರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಯೋಜನೆಯ ಪಾರದರ್ಶಕತೆಗಾಗಿ ಪ್ರತಿಯೊಬ್ಬ ಅರ್ಹ ಫಲಾನುಭವಿಯ ಮರುಪರಿಶೀಲನೆ ಅಗತ್ಯವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಶರಣಪ್ಪ ಮಾತನಾಡಿ, ಕೆಲವು ಪ್ರಕರಣಗಳಲ್ಲಿ ಮರಣ ಹೊಂದಿದ ಮತ್ತು ಅನರ್ಹ ವ್ಯಕ್ತಿಗಳ ಖಾತೆಗೂ ಹಣ ಜಮಾ ಆಗುತ್ತಿರುವುದು ಕಂಡುಬಂದಿದೆ. ಇದನ್ನು ತಡೆಗಟ್ಟಲು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಒಳಗೊಂಡ ಗಣತಿದಾರರ ತಂಡವು ಗ್ಯಾರಂಟಿ ಸಮಿತಿ ಸದಸ್ಯರೊಂದಿಗೆ ಮನೆ-ಮನೆಗೆ ಭೇಟಿ ನೀಡಲಿದೆ. ಒಬ್ಬ ಗಣತಿದಾರರಿಗೆ 250 ಫಲಾನುಭವಿಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.

ಭೇಟಿಯ ಸಮಯದಲ್ಲಿ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಭಾವಚಿತ್ರ, ಆಧಾರ್ ಲಿಂಕ್ ಆಗಿರುವ ಮತ್ತು ಸಾಲವಿಲ್ಲದ ವೈಯಕ್ತಿಕ ಬ್ಯಾಂಕ್/ ಅಂಚೆ ಉಳಿತಾಯ ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು. ಜೊತೆಗೆ ಜಿಪಿಎಸ್ ಫೊಟೋದೊಂದಿಗೆ ಸ್ವಯಂ ಘೋಷಣೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.

ಇಡಿಸಿಎಸ್ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಭವ್ಯ ಅವರು ಮೊಬೈಲ್ ಅಪ್ಲಿಕೇಶನ್ ಬಳಕೆ, ಮುಖ ದೃಢೀಕರಣ ಮತ್ತು ಜಿಪಿಎಸ್ ಫೋಟೊ ಅಪ್‍ಲೋಡ್ ಮಾಡುವ ಬಗ್ಗೆ ವಿವರಿಸಿದರು.

ಮನೆ ಬೀಗ ಹಾಕಿದ್ದಲ್ಲಿ ಜಿಪಿಎಸ್ ಫೋಟೊ ಸೆರೆಹಿಡಿದು, ನಂತರ ಫಲಾನುಭವಿಗಳು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಮಿಷನ್ ಸಂಯೋಜಕಿ ವಿಜಯಲಕ್ಷ್ಮಿ ಹಾಗೂ ಪ್ರಧಾನ ಮಂತ್ರಿ ಮಾತೃವಂದನ ಸಂಯೋಜಕ ಮೆಹಬೂಬ್ ಕುಕನೂರ ಅವರು ಅರ್ಜಿ ನಮೂನೆ ಭರ್ತಿ ಮಾಡುವ ವಿಧಾನದ ಕುರಿತು ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *