ಸುದ್ದಿ ಸಂಗ್ರಹ ಶಹಾಬಾದ್
ಹುಟ್ಟುವ ಪ್ರತಿಯೊಂದು ಮಗು ದೇಶದ ಉತ್ತಮ ಮಾನವ ಸಂಪನ್ಮೂಲವಾಗಬೇಕು ಅಂದಾಗ ಮಾತ್ರ ದೇಶ ಸದೃಢವಾಗಲು ಸಾಧ್ಯ ಎಂದು ಸಿಡಿಪಿಓ ಶಿವಶರಣಪ್ಪ ಭೂಶೆಟ್ಟಿ ಹೇಳಿದರು.
ತಾಲೂಕಿನ ರಾವೂರ ಗ್ರಾಮದ ಅಂಗನವಾಡಿ ಕೇಂದ್ರ 7ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೋಷಣ ಮಾಸಾಚಾರಣೆ ಕಾರ್ಯಕ್ರಮವನ್ನು ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಪೌಷ್ಟಿತಿಕತೆ ಹೋಗಲಾಡಿಸಲು ಮತ್ತು ಗರ್ಭಿಣಿಯರಿಗೆ ಬಾಣoತಿಯರಿಗೆ ಪೌಷ್ಟಿಕ ಆಹಾರದ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಏಕೆಂದರೆ ಹುಟ್ಟುವ ಪ್ರತಿಯೊಂದು ಮಗು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಪೂರ್ಣವಾಗಿರಬೇಕು. ಅಂದಾಗ ಮಾತ್ರ ಆ ಮಗು ದೇಶದ ಮಾನವಸಂಪನ್ಮೂಲವಾಗಲು ಸಾಧ್ಯ. ಪ್ರತಿಯೊಬ್ಬ ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಂದ ಕೊಡುವ ಪೌಷ್ಟಿಕ ಆಹಾರದ ಸದುಪಯೋಗ ಪಡೆಯಬೇಕು, ಹೊರಗಡೆ ಸಿಗುವ ರಾಸಾಯನಿಕಯುಕ್ತ ಆಹಾರ ಸೇವನೆ ಮಾಡಬಾರದು ಯಾಕೆಂದರೆ ಮಗುವಿನ ಮೇಲೆ ಪರಿಣಾಮ ಬಿರುತ್ತದೆ ಎಂದರು.
ರಾವೂರ ಗ್ರಾ.ಪಂ ಪಿಡಿಓ ಕಾವೇರಿ ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಸಿಂಪಿ, ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು.
ಕಾರ್ಯಕ್ರಮದ ಉದ್ದೇಶ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಮತ್ತು ಫಲಾನುಭವಿಗಳ ಕುರಿತು ಶಹಾಬಾದ ವಲಯ ಮೇಲ್ವಿಚಾರಕಿ ಶಕುಂತಲಾ ಸಾಕರೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಐವರು ಗರ್ಭಿಣಿ ಮಹಿಳೆಯರಿಗೆ ಸೀಮಂತ ಸಂಪ್ರದಾಯ ನೆರವೇರಿಸಲಾಯಿತು. ಸಾಂಕೇತಿಕವಾಗಿ ಮೂರು ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಪೋಷಕಾoಶದ ಅರಿವು ಮೂಡಿಸಲು ವಿವಿಧ ತರಹೆವಾರಿ ತರಕಾರಿ, ಹಣ್ಣುಗಳು, ಕಾಳುಗಳು ಮತ್ತು ಆಹಾರ ಪ್ರದರ್ಶಿಸಲಾಯಿತು.
ವೇದಿಕೆಯ ಮೇಲೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ರಾಠೋಡ, ಮೋಹನ ಸೂರೆ ಇದ್ದರು.
ಕಾರ್ಯಕ್ರಮದಲ್ಲಿ ರಾವೂರ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.