ಸುದ್ದಿ ಸಂಗ್ರಹ ಬೆಂಗಳೂರು
ಎಸ್ಎಸ್ಎಲ್ಸಿ ಶುಲ್ಕ ಪರಿಷ್ಕರಣೆಯ ಬೆನ್ನಲ್ಲೆ ರಾಜ್ಯ ಸರ್ಕಾರವು ಪದವಿ ಪೂರ್ವ ವಿದ್ಯಾರ್ಥಿಗಳಿಗೂ ಶುಲ್ಕ ಹೆಚ್ಚಳದ ಶಾಕ್ ನೀಡಿದೆ.
ಪರೀಕ್ಷಾ ಶುಲ್ಕ ಸೇರಿದಂತೆ ಒಟ್ಟು 26 ಬಗೆಯ ವಿವಿಧ ಸೇವೆಗಳ ದರವನ್ನು ಶೇ.50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರಗಳು 2026-27ನೇ ಶೈಕ್ಷಣಿಕ ಸಾಲಿನಿಂದಲೆ ಅನ್ವಯವಾಗಲಿವೆ.
ಕಳೆದ 8 ವರ್ಷಗಳಿಂದ ಯಾವುದೆ ಶುಲ್ಕ ಏರಿಕೆ ಮಾಡಿರದ ಕಾರಣ ಪ್ರಸ್ತುತ ದರ ಪರಿಷ್ಕರಣೆ ಅನಿವಾರ್ಯ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಶೈಕ್ಷಣಿಕ ವೆಚ್ಚಗಳು, ಮುದ್ರಣ ಮತ್ತು ಪರೀಕ್ಷಾ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದಾಗ್ಯೂ, ಏಕಾಏಕಿ ಶೇ.50ರಷ್ಟು ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಹೊರೆ ಹೆಚ್ಚಿಸಲಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.