ಹೈಕೋರ್ಟ್‌ನಲ್ಲಿ ಜನ್ಮದಿನದ ಮೋಜು-ಮಸ್ತಿ: ಎ.ಟಿ ಮೀನಾ ಸೇರಿ ಐವರ ಅಮಾನತು

ರಾಜ್ಯ

ಬೆಂಗಳೂರು: ಹೈಕೋರ್ಟ್‌ನ ನೆಲಮಾಳಿಗೆಯ ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿಸಿ ಜನ್ಮದಿನ ಆಚರಿಸಿಕೊಂಡು ಮೋಜು-ಮಸ್ತಿ ಮಾಡಿದ ಆರೋಪದಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಎ.ಟಿ ಮೀನಾ ಸೇರಿದಂತೆ ಒಟ್ಟು ಐವರನ್ನು ಸೇವೆಯಿಂದ ಅಮಾನತುಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶಿಸಿದೆ.

ದೂರಿನ ಕುರಿತು ವಿಚಾರಣೆ: ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಇಲಾಖಾ ಮುಖ್ಯ ಎಂಜಿನಿಯರ್ ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

22 ಫೆಬ್ರುವರಿ 2025 ರಂದು ಜನ್ಮದಿನ ಆಚರಿಸಿಕೊಂಡಿರುವ ಎ.ಟಿ ಮೀನಾ ಮತ್ತು ಇವರ ಜೊತೆ ಪಾಲ್ಗೊಂಡಿದ್ದ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿಸಿರುವುದು ಭದ್ರತೆ ಮತ್ತು ಕರ್ತವ್ಯ ಲೋಪವಾಗಿದೆ. ಕಚೇರಿಯ ಘನತೆ ಹಾಗೂ ಗೌರವ ಕಾಪಾಡಿಕೊಳ್ಳುವಲ್ಲಿ ಇವರೆಲ್ಲಾ ವಿಫಲವಾಗಿದ್ದಾರೆ. ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮೀನಾ ಸೇರಿದಂತೆ ಪ್ರಥಮ ದರ್ಜೆ ಸಹಾಯಕ
ಜಿ.ಎಚ್‌ ಚಿಕ್ಕೆಗೌಡ, ಸಹಾಯಕ ಎಂಜಿನಿಯರ್‌ಗಳಾದ ಲಾವಣ್ಯ, ನವೀನ್ ಮತ್ತು ಅಮೀನ್ ಎಸ್ ಅನ್ನದಿನ್ನಿ ಅವರು ಕರ್ನಾಟಕ ರಾಜ್ಯ ನಾಗರಿಕ (ನಡತೆ) ನಿಯಮಗಳು-2012 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುತ್ತಾರೆ ಎಂದು ಉಲ್ಲೇಖಿಸಿ ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *