ಕಳ್ಳತನಕ್ಕೆ ಹೋದವನು ಮನೆಯಲ್ಲೆ ನಿದ್ದೆಗೆ ಜಾರಿದ ಭೂಪ: ಎದ್ದು ನೋಡಿದಾಗ ಎದುರಿಗೆ ಮನೆ ಮಾಲೀಕರಿದ್ದರು, ಮುಂದೇನಾಯ್ತು ?

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಹೈದರಾಬಾದ್‌
ಮನೆಗೆ ನುಗ್ಗಬೇಕು, ಚಿನ್ನ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಬೇಕು, ಮಾಲೀಕರು ವಾಪಸ್ ಬರುವ ಮೊದಲೆ ಅಲ್ಲಿಂದ ಕಾಲ್ಕಿತ್ತಬೇಕು. ಇದು ಕಳ್ಳನೊಬ್ಬನ ಪ್ಲಾನ್ ಆಗಿತ್ತು. ಆದರೆ ಹೈದರಾಬಾದ್‌ನಲ್ಲಿ ನಡೆದ ಈ ಘಟನೆಯಲ್ಲಿ ಕಳ್ಳ ಮನೆಯಿಂದ ಹೊರಗೆ ಹೋಗಲೇ ಇಲ್ಲ. ಬದಲಾಗಿ, ಚಿನ್ನಾಭರಣ ಕದ್ದ ನಂತರ ಆತ ಅದೆ ಕೋಣೆಯಲ್ಲಿ ಆರಾಮವಾಗಿ ನಿದ್ದೆಗೆ ಜಾರಿದ್ದಾನೆ. ಮನೆಗೆ ವಾಪಸ್ ಬಂದ ಕುಟುಂಬಸ್ಥರಿಗೆ ಈ ದೃಶ್ಯ ನೋಡಿ ಶಾಕ್ ಆಗಿದೆ.

ಚಿನ್ನಾಭರಣ ಪಕ್ಕದಲ್ಲಿಟ್ಟುಕೊಂಡು ಮಲಗಿದ ಕಳ್ಳ
ಆರೋಪಿ ಅದೆ ಪ್ರದೇಶದ ನಿವಾಸಿ ಎನ್ನಲಾಗಿದೆ. ಕಳ್ಳತನ ಮಾಡುವ ಉದ್ದೇಶದಿಂದಲೇ ಆತ ಮನೆಗೆ ನುಗ್ಗಿದ್ದ. ಈ ವೇಳೆ ಆತ ಗಾಂಜಾ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ನುಗ್ಗಿದ ನಂತರ, ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾನೆ. ಆದರೆ ಕದ್ದ ವಸ್ತುಗಳೊಂದಿಗೆ ಪರಾರಿಯಾಗುವ ಬದಲು, ಆತ ಅದೆ ಮನೆಯಲ್ಲಿ ಆರಾಮವಾಗಿ ಮಲಗಿಬಿಟ್ಟಿದ್ದಾನೆ.

ಬೆಳಗ್ಗೆ ವೇಳೆಗೆ ಮನೆಗೆ ಬಂದ ಮನೆಯ ಮಾಲೀಕರಿಗೆ ಅಚ್ಚರಿಯ ದೃಶ್ಯ ಕಾದಿತ್ತು. ಮನೆಯ ಕಪಾಟು ಚೆಲ್ಲಾಪಿಲ್ಲಿಯಾಗಿತ್ತು ಮತ್ತು ಅಪರಿಚಿತ ವ್ಯಕ್ತಿಯೊಬ್ಬ ಕೋಣೆಯ ಹಾಸಿಗೆಯ ಮೇಲೆ ಮಲಗಿದ್ದನು. ಆತನನ್ನು ಪರಿಶೀಲಿಸಿದಾಗ, ಕದ್ದ ಚಿನ್ನಾಭರಣಗಳು ಅವನ ಜೇಬಿನಲ್ಲಿ ಪತ್ತೆಯಾಗಿವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆತನನ್ನು ತಕ್ಷಣವೇ ಎಬ್ಬಿಸುವ ಬದಲು, ಕುಟುಂಬಸ್ಥರು ಈ ವಿಚಿತ್ರ ಘಟನೆಯನ್ನು ವಿಡಿಯೋ ಮಾಡಿ, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ಕಳ್ಳ
ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕದ್ದೊಯ್ದಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಸಿಕ್ಕಿಬಿದ್ದಾಗ ತೀವ್ರ ಮತ್ತಿನಲ್ಲಿದ್ದಂತೆ ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಹಿಂದೆ ಬೇರೆ ಯಾವುದೆ ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *