ಸುದ್ದಿ ಸಂಗ್ರಹ ಕಲಬುರಗಿ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಏಜೆಂಟರು ಮತ್ತು ಮತದಾರರು ಸಕ್ರಿಯವಾಗಿ ಭಾಗವಹಿಸಬೇಕು. ಗೈರು, ಸ್ಥಳಾಂತರ, ಮರಣ, ಎರಡು ಕಡೆ ಹೆಸರು ಇರುವುದರ (ಎಎಸ್ಡಿಡಿ) ಬಗ್ಗೆಯೂ ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿಯವರೆಗೂ ಜಿಲ್ಲೆಯಲ್ಲಿ 2,59,949 ಮತದಾರರನ್ನು ಗೈರು, ಸ್ಥಳಾಂತರ, ನಿಧನ ಮತ್ತು ಎರಡು ಕಡೆ ಹೆಸರು ಇರುವವರು ಎಂದು ಬಿಎಲ್ಒಗಳು ವರ್ಗೀಕರಿಸಿದ್ದಾರೆ. ಕ್ಷೇತ್ರ ಪರಿಶೀಲನೆ ಸಂದರ್ಭದಲ್ಲಿ ಮತ್ತು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಒಂದು ವೇಳೆ ಈ ಪಟ್ಟಿಯಲ್ಲಿ ಹೆಸರಿದ್ದಲ್ಲಿ ಅಂತಹವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ. ಹೀಗಾಗಿ ಪಟ್ಟಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ ಎಎಸ್ಡಿಡಿ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರನ್ನು ತಪ್ಪಾಗಿ ಸೇರಿಸಿದ್ದರೆ, ಅಗತ್ಯ ಮಾಹಿತಿ ಮತ್ತು ಪೂರಕ ದಾಖಲೆಗಳೊಂದಿಗೆ ತಕ್ಷಣವೇ ಸಂಬಂಧಪಟ್ಟ ಬಿಎಲ್ಒಗಳ ಗಮನಕ್ಕೆ ತಂದು ಸರಿಪಡಿಸಬೇಕು. ಗಣತಿ ನಮೂನೆ ಪಡೆದು ಇದುವರೆಗೂ ಹಿಂದಿರುಗಿಸದವರನ್ನು ಎಎಸ್ಡಿಡಿ ಪಟ್ಟಿಗೆ ಸೇರಿಸಲಾಗುತ್ತದೆ. ಇದಕ್ಕೆ ಮತದಾರರೆ ಹೊಣೆ ಎಂದಿದ್ದಾರೆ.
ಕೆಲ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಇರುವುದನ್ನು ಪತ್ತೆ ಹಚ್ಚಲಾಗಿದೆ. ಕಾನೂನಿನ ಪ್ರಕಾರ ಒಬ್ಬ ಮತದಾರ ಒಂದು ಕ್ಷೇತ್ರದಲ್ಲಿ ಮಾತ್ರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಕೊನೆ ದಿನಾಂಕದವರೆಗೆ ಕಾಯದೆ ಪ್ರಸ್ತುತ ಸಾಮಾನ್ಯವಾಗಿ ವಾಸಿಸುವ ಮತ್ತು ಮತ ಚಲಾಯಿಸ ಬಯಸುವ ಕ್ಷೇತ್ರದಲ್ಲಿ ಗಣತಿ ನಮೂನೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
