ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಒಟ್ಟು 72,186 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದ್ದು, ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32,177 ಹುದ್ದೆಗಳ ಪೈಕಿ ಶೇ.80 ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸಹಮತಿ ನೀಡಲಾಗಿದೆ.
ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಯ್ಕೆ ಪ್ರಾಧಿಕಾರಗಳಿಂದ ಕ್ರಿಯಾ ಯೋಜನೆಗಳನ್ನ ಪಡೆದು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲಾಗಿತ್ತು. ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಈ ಸಂಬಂಧ ಇನ್ನೂ 2 ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ, ಮುಂದಿನ 4 ತಿಂಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನ ನಡೆಸಲು, ಒಟ್ಟಾರೆ 6 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿಗೆ ಆದೇಶ ನೀಡಲು ಸೂಚಿಸಿದೆ.
17 ಇಲಾಖೆಗಳಲ್ಲಿನ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ತ್ವರಿತಗತಿಯಲ್ಲಿ ಭರ್ತಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ. ಇನ್ನೂ 34 ಇಲಾಖೆಗಳಲ್ಲಿನ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲಾಗಿದೆ.