ಸುದ್ದಿ ಸಂಗ್ರಹ ಶಹಾಬಾದ್
ವಚನ ಸಾಹಿತ್ಯ ನಮ್ಮ ಬದುಕಿನ ಆದರ್ಶಗಳಾಗಿವೆ, ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ. ಅಂತಹ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡಿದ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ನಿಜವಾದ ಸಾಧಕರಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಹೇಳಿದರು.
ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ‘ವಚನ ಸಂರಕ್ಷಣಾ ದಿನದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ನಾವು ಶರಣರ ವಚನಗಳನ್ನು ಅವರ ಜೀವನವನ್ನು ಪುಸ್ತಕಗಳಲ್ಲಿ ಓದುತ್ತಿದ್ದರೆ ಅದು ಫ.ಗು ಹಳಕಟ್ಟಿ ಅವರ ಪರಿಶ್ರಮದಿಂದ ತಮ್ಮ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿ ಮನೆ- ಮಠಗಳಿಗೆ ತೆರಳಿ ತಾಡೋಲೆ, ತಾಳೆಗರಿ, ವಚನಗಳ ಕಟ್ಟುಗಳನ್ನು ಸಂಗ್ರಹಣೆ ಮಾಡಿ ಅವುಗಳ ಮುದ್ರಣಕ್ಕೆ ತಮ್ಮ ಮನೆಯನ್ನೆ ಮಾರಿ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸಿದವರು ಹಳಕಟ್ಟಿಯವರು. ವೈಚಾರಿಕತೆ, ವೈಜ್ಞಾನಿಕತೆ ಮತ್ತು ಜೀವನ ಮೌಲ್ಯಗಳನ್ನು ಹೊಂದಿರುವ ಇಂತಹ ಸಾಹಿತ್ಯ ರಚನೆ ಮಾಡಿ ಉಳಿಸಿದ್ದಕ್ಕೆ ನಾವೇಲ್ಲಾ ಹಳಕಟ್ಟಿ ಶರಣರಿಗೆ ಋಣಿಯಾಗಿದ್ದೆವೆ ಎಂದರು.
ಜಿಲ್ಲಾ ಕಸಾಪ ಗೌರವಕಾರ್ಯದರ್ಶಿ ಧರ್ಮಣ್ಣ ಧನ್ನಿ ಮಾತನಾಡಿ, ಮಕ್ಕಳಲ್ಲಿ ವಚನ ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸಿ ವಚನ ಸಾಹಿತ್ಯದ ಅಭಿರುಚಿ ಮೂಡಿಸುತ್ತಿರುವ ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯ. ಹೆಚ್ಚು ಹೆಚ್ಚು ವಚಗಳ ಅಧ್ಯಯನ ಹಾಗೂ ಅವುಗಳ ಅರ್ಥ ತಿಳಿದುಕೊಂಡು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಮಾತನಾಡಿದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತ 50 ಮಕ್ಕಳಿಗೆ ಮೆಡಲ್, ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. 9ನೇ ತರಗತಿಯ ಕುಮಾರಿ ಭಾಗ್ಯಶ್ರೀ ತಂದೆ ಈಶ್ವರಾಜ ನೂರು ವಚನಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಗಮನ ಸೆಳೆದಳು.
ವೇದಿಕೆಯ ಮೇಲೆ ಕೇಂದ್ರ ಕಸಾಪ ಕಾರ್ಯಕಾರಿ ಸದಸ್ಯ ಸಯ್ಯದ್ ನಜಿರುದ್ದಿನ ಮುತ್ತಾವಲ್ಲಿ ಮತ್ತು ಸಂಸ್ಥೆ ಸದಸ್ಯ ಸಿದ್ದಲಿಂಗ ಜ್ಯೋತಿ ಇದ್ದರು.
ಈರಣ್ಣ ಹಳ್ಳಿ ವಚನ ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಶಿಕ್ಷಕರು, ಮಕ್ಕಳು ಮತ್ತು ಪಾಲಕರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.