ಬಿಟ್ಟು ಬಿಡದೆ ಕಾಡಿದ ತಪ್ಪಿತಸ್ಥ ಭಾವನೆ: ಅಶ್ವಿನಿ ಬಳಿ ಕ್ಷಮೆ ಕೇಳಿದ ಗಿಲ್ಲಿ

ಸುದ್ದಿ ಸಂಗ್ರಹ

ಬಿಗ್ ಬಾಸ್​ನಲ್ಲಿ ಅಶ್ವಿನಿ ಗೌಡ vs ಗಿಲ್ಲಿ ಎಂಬಂತಾಗಿದೆ. ಯಾವುದೆ ಟಾಸ್ಕ್ ನೀಡಲಿ, ಮನೆಯಲ್ಲಿ ಯಾವುದಾದರೂ ವಿಷಯ ಚರ್ಚೆ ಆಗುತ್ತಿರಲಿ, ಗಿಲ್ಲಿ ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆಗಿಯೇ ಆಗುತ್ತದೆ. ಇಬ್ಬರು ಎದುರು ಬದುರಾದಾಗ ನಗುತ್ತಾ ಮಾತನಾಡಿದ ದಾಖಲೆಯೆ ಇಲ್ಲ ಎಂದರೂ ತಪ್ಪಾಗಲಾರದು.

ಇಬ್ಬರು ಹಿಡಿದ ಹಠ ಬಿಡೋದಿಲ್ಲ. ಹೀಗಿರುವಾಗಲೆ ಗಿಲ್ಲಿ ಅವರು ಅಶ್ವಿನಿ ಬಳಿ ಕ್ಷಮೆ ಕೇಳಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ.

ಕ್ಯಾಪ್ಟನ್ಸಿ ರೇಸ್​ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಗೌಡ ಇದ್ದರು. ಇಬ್ಬರೂ ಸರದಿಯಲ್ಲಿ ಬಂದು ಕೂರಬೇಕು. ಹೀಗೆ ಕೂತಾಗ ಮನಸ್ಸಿನಲ್ಲೇ ಲೆಕ್ಕ ಹಾಕಿ 12 ನಿಮಿಷವಾದ ಬಳಿಕ ಗಂಟೆ ಬಾರಿಸಬೇಕು. 12 ನಿಮಿಷಕ್ಕೆ ಯಾರು ಹತ್ತಿರವಿದ್ದಾರೋ ಅವರು ವಿನ್ ಆದಂತೆ. ಈ ಸಂದರ್ಭದಲ್ಲಿ ಅಶ್ವಿನಿ ಅವರ ಲೆಕ್ಕಾಚಾರ ತಪ್ಪಿಸಲು ಅವಕಾಶ ಇತ್ತು. ಗಿಲ್ಲಿ ಅವರು ಹೋಗಿ ಅಶ್ವಿನಿ ಅವರನ್ನು ಟೀಕೆ ಮಾಡಲು ಆರಂಭಿಸಿದರು. ಅಲ್ಲಿ ಆಡಿದ ಮಾತುಗಳಲ್ಲಿ ಕೆಲವು ಮಿತಿಮೀರಿತ್ತು. ಇದು ಅಶ್ವಿನಿ ಗೌಡ ಅವರಿಗೆ ಬೇಸರ ಮೂಡಿಸಿದೆ.

ಇದಾದ ಬಳಿಕ ಅಶ್ವಿನಿ ಗೌಡ ಅವರು ರೂಂನಲ್ಲಿ ಮಲಗಿ ಅತ್ತಿದ್ದಾರೆ. ಈ ವಿಚಾರದಲ್ಲಿ ಜಾನ್ವಿ ಅವರು ಗಿಲ್ಲಿ ಜೊತೆ ಮಾತನಾಡಿದರು. ಅಶ್ವಿನಿ ಗೌಡ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ ಎಂದು ಗಿಲ್ಲಿಗೆ ಹೇಳಿದರು. ‘ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕು. ಅದಕ್ಕೆ ಈ ರೀತಿ ಮಾಡೋದು ಸರಿಯಲ್ಲ, ಛೇ’ ಎಂದರು ಗಿಲ್ಲಿ. ಅವರಿಗೆ ತಪ್ಪಿತಸ್ಥ ಭಾವನೆ ಕಾಡಿದೆ. ಆ ಬಳಿಕ ಅಶ್ವಿನಿ ಅವರು ಇದ್ದಲ್ಲೇ ತೆರಳಿ ಕ್ಷಮೆ ಕೇಳಿದ್ದಾರೆ.

‘ಟಾಸ್ಕ್​ನಲ್ಲಿ ನನ್ನಿಂದ ಮನಸ್ಸಿಗೆ ನೋವಾದರೆ ಕ್ಷಮಿಸಿ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಗೇಮ್, ಅದನ್ನು ಗೇಮ್ ಆಗಿ ತೆಗೆದುಕೊಳ್ಳಿ. ನನ್ನ ಮನಸ್ಸಿಗೂ ನೋವಾಗುತ್ತದೆ’ ಎಂದರು ಗಿಲ್ಲಿ. ಅವರು ಕ್ಷಮೆ ಕೇಳಿದ ವಿಚಾರ ರಘು ಅವರಿಗೆ ಶಾಕ್ ತಂದಿದೆ. ಇತ್ತೀಚೆಗೆ ರಘು ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆದಾಗ ‘ರಘು ಅವರೆ ಕ್ಷಮೆ ಕೇಳಬೇಡಿ’ ಎಂದಿದ್ದರು ಗಿಲ್ಲಿ. ಈಗ ಗಿಲ್ಲಿಯೇ ಈ ರೀತಿ ಮಾಡಿದ್ದು ರಘು ಅವರಿಗೆ ಅಚ್ಚರಿ ಎನಿಸಿದೆ.

Leave a Reply

Your email address will not be published. Required fields are marked *