ಅಂಧ ವಿದ್ಯಾರ್ಥಿನಿ ಬಾಳಲ್ಲಿ ಆಟವಾಡಿದ SSLC ಬೋರ್ಡ್:  84% ಪರ್ಸೆಂಟೇಜ್ ಅಂಕ ಗಳಿಸಿದರೂ ಫೇಲ್

ಜಿಲ್ಲೆ

ಸುದ್ದಿ ಸಂಗ್ರಹ ಉತ್ತರ ಕನ್ನಡ
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಮತ್ತು ಪರೀಕ್ಷಾ ಪ್ರಾಧಿಕಾರದ ಅಚಾತುರ್ಯವೊಂದು ಬೆಳಕಿಗೆ ಬಂದಿದೆ. ಹಗಲಿರುಳು ಶ್ರಮಪಟ್ಟು ಅಭ್ಯಾಸ ಮಾಡಿ, ಅತ್ಯುತ್ತಮ ಅಂಕ ಗಳಿಸಿದರೂ ಸಹ, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ‘ಫೇಲ್’ ಎಂದು ಘೋಷಿಸಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಜಾ ಖಾನಮ್ ಈ ಅನ್ಯಾಯಕ್ಕೆ ಒಳಗಾದ ಪ್ರತಿಭೆ. ಲೀಜಾ ಹುಟ್ಟಿನಿಂದಲೇ ಅಂಧತ್ವ ಹೊಂದಿದ್ದರೂ, ತನ್ನ ದೈಹಿಕ ಮಿತಿಯನ್ನು ಮೀರಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದವಳು. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಲೀಜಾ ಅತ್ಯಂತ ಅದ್ಭುತವಾಗಿ ಪ್ರದರ್ಶನ ನೀಡಿದ್ದಾಳೆ. ಆದರೆ ಫಲಿತಾಂಶ ಬಂದಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಆಘಾತ ಕಾದಿತ್ತು.

ಲೀಜಾ ಖಾನಮ್ ಪಡೆದ ಅಂಕಗಳು ಯಾವುದೆ ಸಾಮಾನ್ಯ ವಿದ್ಯಾರ್ಥಿಗೂ ಮಾದರಿಯಾಗುವಂತಿವೆ

ಉರ್ದು: 124
ಕನ್ನಡ: 100
ಇಂಗ್ಲಿಷ್: 92
ಎಕನಾಮಿಕ್ಸ್: 98
ಪೊಲಿಟಿಕಲ್ ಸೈನ್ಸ್: 92

ಒಟ್ಟು 625 ಅಂಕಗಳಿಗೆ ಲೀಜಾ ಬರೋಬ್ಬರಿ 526 ಅಂಕಗಳನ್ನು ಗಳಿಸಿದ್ದಾಳೆ. ಅಂದರೆ ಶೇಕಡಾ 84.16ರಷ್ಟು ಫಲಿತಾಂಶ ಆಕೆಯದ್ದಾಗಿದೆ. ಆದರೆ ಫಲಿತಾಂಶದ ಪಟ್ಟಿಯಲ್ಲಿ ಆಕೆಯನ್ನು ‘FAIL’ ಎಂದು ನಮೂದಿಸಲಾಗಿದೆ.

ಲೀಜಾ ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದಾಳೆ. ಆದರೆ ಪರೀಕ್ಷಾ ಪ್ರಾಧಿಕಾರವು ಸೋಷಿಯಲ್ ಸೈನ್ಸ್ (ಸಮಾಜ ವಿಜ್ಞಾನ) ವಿಷಯಕ್ಕೆ ವಿದ್ಯಾರ್ಥಿನಿ ಗೈರು ಹಾಜರಾಗಿದ್ದಾಳೆ ಎಂದು ನಮೂದಿಸಿದೆ. ಈ ಒಂದು ಸಣ್ಣ ಎಡವಟ್ಟಿನಿಂದಾಗಿ ಅಷ್ಟೊಂದು ಅಂಕ ಪಡೆದರೂ ಲೀಜಾ ಫಲಿತಾಂಶದಲ್ಲಿ ಫೇಲ್ ಎಂದು ಬಂದಿದೆ.

ದಾಖಲೆ ಇದ್ದರೂ ನಿರ್ಲಕ್ಷ್ಯ
ತಾನು ಪರೀಕ್ಷೆಗೆ ಹಾಜರಾಗಿರುವ ಬಗ್ಗೆ ಲೀಜಾ ಬಳಿ ಭದ್ರವಾದ ಪುರಾವೆಯಿದೆ. ಪರೀಕ್ಷಾ ಪ್ರವೇಶ ಪತ್ರದ ಮೇಲೆ ಆಯಾ ದಿನದ ಪರೀಕ್ಷಾ ಮೇಲ್ವಿಚಾರಕರು ಸಹಿ ಮಾಡಿದ್ದಾರೆ. ಈ ಪ್ರವೇಶ ಪತ್ರವನ್ನು ಹಿಡಿದು ಲೀಜಾ ಮತ್ತು ಆಕೆಯ ಪೋಷಕರು ಇಂದು ಕಣ್ಣೀರು ಹಾಕುತ್ತಿದ್ದಾರೆ. ‘ನಾನು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೆನೆ, ನನ್ನ ಬಳಿ ಸಹಿ ಇರುವ ಹಾಲ್ ಟಿಕೆಟ್ ಕೂಡ ಇದೆ. ಹೀಗಿದ್ದರೂ ನನ್ನನ್ನು ಫೇಲ್ ಮಾಡಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ’ ಎಂದು ಲೀಜಾ ಅಳಲು ತೋಡಿಕೊಂಡಿದ್ದಾಳೆ.

ಒಬ್ಬ ಅಂಧ ವಿದ್ಯಾರ್ಥಿನಿ ಇಷ್ಟೊಂದು ಸಾಧನೆ ಮಾಡಿದಾಗ ಬೆನ್ನು ತಟ್ಟಬೇಕಾದ ಸರ್ಕಾರಿ ವ್ಯವಸ್ಥೆ, ಆಕೆಯ ಭವಿಷ್ಯದ ಜೊತೆ ಆಟವಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿರಸಿಯ ಯುನಿಯನ್ ಉರ್ದು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೂಡಲೇ ಈ ತಪ್ಪು ತಿದ್ದಿ ಲೀಜಾಗೆ ನ್ಯಾಯ ಒದಗಿಸಬೇಕೆಂದು ಪರೀಕ್ಷಾ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ತಾಂತ್ರಿಕ ದೋಷವನ್ನು ಸರಿಪಡಿಸಿ, ಲೀಜಾ ಖಾನಮ್ ಅವರ ಪರಿಷ್ಕೃತ ಫಲಿತಾಂಶ ಪ್ರಕಟಿಸಬೇಕಿದೆ.

Leave a Reply

Your email address will not be published. Required fields are marked *