ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ, ಕ್ರಮಕ್ಕೆ ಸಂಘ ಒತ್ತಾಯ

ಸುದ್ದಿ ಸಂಗ್ರಹ

ಚಿತ್ತಾಪುರ: ತಾಲೂಕಿನಲ್ಲಿ ಅಕ್ಟೋಬರ್ ತಿಂಗಳ ಸಾರ್ವಜನಿಕರ ಆಹಾರ ವಿತರಣೆ ವ್ಯವಸ್ಥೆಯಲ್ಲಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮುಖಾಂತರ ವಿತರಣೆ ಮಾಡುವದಕ್ಕಾಗಿ ಸರ್ವರ್ ಸಮಸ್ಯೆ ತುಂಬಾ ಉಂಟಾಗಿದೆ. ಕೂಡಲೇ ಸರ್ವರ್ ಸಮಸ್ಯೆ ಪರಿಹಾರ ಮಾಡಿ ಪಡಿತರ ವಿತರಣೆಗೆ ಸುಗಮವಾಗಿ ಕಲ್ಪಿಸಬೇಕು ಎಂದು ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಉಪಾಧ್ಯಕ್ಷ, ತಾಲೂಕು ಅಧ್ಯಕ್ಷ ಧನರಾಜ್ ಯಾದವ ಹೇಳಿದರು. 

ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿರುವ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಆಹಾರ ಇಲಾಖೆಯವರು ಈ ಮೊದಲು ಎನ್ಐಸಿ ಸರ್ವರ್ ಮುಖಾಂತರ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಹೊಸದಾಗಿ ಕೆ.ಎಸ್.ಡಿ.ಸಿ ಸರ್ವರ್ ಅಳವಡಿಸಲಾಗಿದೆ. ಈ ಸರ್ವರ್ ಮುಖಾಂತರ ಅಕ್ಟೋಬರ್ ತಿಂಗಳ ಪಡಿತರ ವಿತರಣೆ ಮಾಡಲು 18 ರಿಂದ ತಿಳಿಸಿದ್ದಾರೆ. 

ಆದರೆ 20 ದಿನಗಳು ಕಳೆದಿವೆ. ಕೆ.ಎಸ್.ಡಿ.ಸಿ ಸರ್ವರ್ ಸರಿಯಾಗಿ ಬರುತ್ತಿಲ್ಲ ಇದರಿಂದ ದಿನಕ್ಕೆ 8 ರಿಂದ 10 ಕಾರ್ಡುಗಳನ್ನು ವಿತರಣೆ ಮಾಡಲು ಸಾಧ್ಯವಾಗುತ್ತಿದೆ. ಈ ಮೊದಲು ಏನ್.ಐ.ಸಿ ಸರ್ವರ್ ಇದ್ದಾಗ ದಿನಕ್ಕೆ 200 ಕಾರ್ಡುಗಳಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿತ್ತು. ಈಗ ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಆಹಾರ ಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು, ವೃದ್ಧರು ಬಿಸಿಲಿನಲ್ಲಿ ನಿಂತು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅವಾಚ್ಯ  ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೂ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ತುಂಬಾ ಮನನೊಂದಿದ್ದಾರೆ. ಇದರಿಂದ ಗ್ರಾಹಕರು ಪಡಿತರ ಅಂಗಡಿ ಮಾಲಿಕರಿಗೆ ಹಾಗೂ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸರ್ವರ್ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದರು. ಯಾವುದೆ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದಾರೆ ಎಂದರು. 

ಇನ್ನೂ ಒಂದು ವಾರದೊಳಗೆ ದೀಪಾವಳಿ ಹಬ್ಬ ಇರುವ ಕಾರಣ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲು ಸಮಯ ಬಹಳ ಕಡಿಮೆ ಇದೆ. ಅತಿ ಶೀಘ್ರದಲ್ಲಿ ಸರ್ವರ್ ಸಮಸ್ಯೆ ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ಮಾಡುವಲ್ಲಿ ಯಾವುದೇ ಅನುಮಾನವಿಲ್ಲ. ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿ ಮಾಲೀಕರ ಸಮಯಭಾವದಿಂದ ಶೇಕಡ 100 ರಷ್ಟು ಪಡಿತರ ಆಹಾರ ವಿತರಣೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿಯ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ ಎಂದರು.

 ಅದಕ್ಕಾಗಿ ಸಂಬಂಧಿಸಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಹಾರ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿಗಳು,  ಜಿಲ್ಲೆಯ ಆಹಾರ ಇಲಾಖೆ ನಿರ್ದೇಶಕರು ತಕ್ಷಣ ಸರ್ವರ್ ಸಮಸ್ಯೆ ಬಗೆಹರಿಸಿ ಆಹಾರಧಾನ್ಯ ವಿತರಣೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. 

 ಸುದ್ದಿಗೋಷ್ಠಿಯಲ್ಲಿ ನಾಗರಾಜ ಹೂಗಾರ, ಅಬ್ದುಲ್ ರೆಹಮಾನ್, ಸಂಜು ಕೊಟ್ರಕಿ, ಸಂತೋಷ ಸುಗಂಧಿ, ನಾಗರಾಜ ಚಕ್ಕಡಿ, ಮಲ್ಲಿಕಾರ್ಜುನ ಸುಲಹಳ್ಳಿ, ಸುಧೀರ ಪೂಜಾರಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *