ಪ್ರೆಯಸಿಯ ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪೊಲೀಸ್ ಪೇದೆ

ಸುದ್ದಿ ಸಂಗ್ರಹ

ಕೊಡಗು: ಪೊಲೀಸ್​ ಪೇದೆಯೊರ್ವ ಕೊಲೆ ಮಾಡಲು ಯತ್ನಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ.

ಕೊಲೆ ಮಾಡಲು ಯತ್ನಿಸಿದ್ದ ಪೊಲೀಸ್​ ಪೇದೆ ​​​​ಕೊಟ್ರೇಶ್​ ಮತ್ತು ಕೊಲೆಗೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೊಟ್ರೇಶ್​ ಪ್ರಿಯತಮೆ ಆಯಿಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಟ್ರೇಶ್​​ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಠಾಣೆಯಲ್ಲಿ ಪೊಲೀಸ್​ ಪೇದೆಯಾಗಿದ್ದಾರೆ.

ಶನಿವಾಸಂತೆಯ ನಿವಾಸಿ ಇಫ್ರಾಜ್ ಎಂಬುವರು ಆರು ವರ್ಷಗಳ ಹಿಂದೆ ಆಯಿಷಾಳನ್ನು ವಿವಾಹವಾಗಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಇಬ್ಬರ ಮಧ್ಯೆ ಅಷ್ಟೊಂದು ಅನ್ಯೊನತೆ ಇರಲಿಲ್ಲ. ಪತಿ ಪತ್ನಿ ಜಗಳವಾಡಿ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೆರಿದ್ದರು.

ಪೊಲೀಸ್​ ಪೇದೆ ಕೋಟ್ರೆಶ್​ ಪ್ರೇಯಸಿ ಆಯಿಷಾಳ ಪಕ್ಕದ ಮನೆಯಲ್ಲಿ ವಾಸವಾಗಿದ್ದಾರೆ. ಆಯಿಷಾ ಪೊಲೀಸ್​ ಪೇದೆ ​​​​​ಕೊಟ್ರೇಶ್​ನನ್ನು ಅ.16 ಮಧ್ಯರಾತ್ರಿ ಮನೆಗೆ ಕರೆಸಿದ್ದಾಳೆ. ಕೊಟ್ರೇಶ್​​ ದಿಂಬಿನಿಂದ ಉಸಿರುಗಟ್ಟಿಸಿ ಆಯಿಷಾ ಪತಿ ಇಫ್ರಾಜ್​ರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಫ್ರಾಜ್​​ ಜೋರಾಗಿ ಕೂಗಿಕೊಂಡಿದ್ದಾರೆ. ಪಕ್ಕದ ಕೋಣೆಯಲ್ಲಿ ಮಲಗಿದ್ದ ಇಫ್ರಾಜ್​ ಅವರ ​ಅಕ್ಕನ ಮಗ ಬಂದು ಬಾಗಿಲು ಒಡೆದು, ಅವರನ್ನು ರಕ್ಷಿಸಿದ್ದಾರೆ. ಬಳಿಕ ಇಫ್ರಾಜ್​ ಆರೋಪಿ ಕೊಟ್ರೇಶ್​​ನ ಬೆರಳು ಕಚ್ಚಿ ಪಾರಾಗಿದ್ದರು. ಬಳಿಕ ಇಫ್ರಾಜ್​ ಶನಿವಾರಸಂತೆ ಉಪಠಾಣೆಗೆ ತೆರಳಿ ದೂರು ನೀಡಲು ಮುಂದಾದರು, ಆದರೆ ಆಷಿಯಾ ಕೂಡ ದೂರು ನೀಡಿದ್ದರಿಂದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿಲ್ಲ‌.

ಸೋಮವಾರಪೇಟೆ ಮುಖ್ಯ ಠಾಣೆಯಲ್ಲೂ ಪ್ರಕರಣ ದಾಖಲಿಸಿಕೊಳ್ಳದೆ ಪೊಲಿಸರು ನನ್ನನ್ನು ಬೆದರಿಸಿ ಕಳುಹಿಸಿದರು ಎಂದು ಇಫ್ರಾಜ್​​ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರನ್ನು ನೇರವಾಗಿ ಭೇಟಿಮಾಡಿ ದೂರು ನೀಡಿದ್ದಾರೆ.

ಸೋಮವಾರಪೇಟೆ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಎಸ್ಪಿ ರಾಮರಾಜನ್ ಪೊಲಿಸರಿಗೆ ಸೂಚಿಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೊಲೆ ಯತ್ನದ ದೂರು ದಾಖಲಿಸಿಕೊಂಡಿದ್ದಾರೆ.

ವಿಚಿತ್ರ ಅಂದರೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವವರೆಗೂ ತನ್ನ ಪತ್ನಿ ಜೊತೆ ಸೇರಿ ದಾಳಿ ಮಾಡಿದ್ದು ಯಾರು ? ಎಂಬ ಮಾಹಿತಿ ಇಫ್ರಾಜ್​ಗೆ ಇರಲಿಲ್ಲ. ಆದರೆ ಎಸ್ಪಿ ಭೇಟಿ ಮಾಡಿದ ಬಳಿಕ ಶನಿವಾರಸಂತೆ ಪೊಲೀಸ್​ ಠಾಣೆಗೆ ದೂರು ನೀಡಲು ತೆರಳಿದಾಗ ಅಲ್ಲಿದ್ದ ಪೇದೆ ಕೊಟ್ರೇಶ್​ ಅಸಹಜವಾಗಿ ವರ್ತಿಸಲು ಶುರುಮಾಡಿದ್ದಾನೆ. ತನ್ನ ಕೈ ಬೆರಳನ್ನು ಮುಚ್ಚಿಕೊಳ್ಳಲು ಶುರುಮಾಡಿದ್ದಾನೆ.

ತೀವ್ರ ಬೆವರುತ್ತಿದ್ದ ಆತ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾನೆ. ಈ ಸಂದರ್ಭದಲ್ಲಿ ಇಫ್ರಾಜ್ ಆತನ ಬೆರಳನ್ನ ನೋಡಿದಾಗ ಗಾಯವಾಗಿರವದನ್ನು ಕಂಡಿದ್ದಾರೆ. ಅಲ್ಲದೆ ಕೊಲೆ ಯತ್ನ ಸಂದರ್ಭದಲ್ಲಿ ಕೊಟ್ರೇಶ್​​ ಓಡಿ ಹೋಗುವಾಗ ಚಪ್ಪಲಿ ಬಿಟ್ಟು ಹೋಗಿದ್ದಾನೆ. ಈ ಪೇದೆಯ ಶೂ ಸೈಜ್ ಮತ್ತು ಆ ಚಪ್ಪಲಿಯ ಸೈಜ್ ಮ್ಯಾಚ್​ ಆಗಿದೆ.
ಅಲ್ಲದೆ ಕೊಲೆ ಯತ್ನ ಸಂದರ್ಭದಲ್ಲಿ ಆರೋಪಿ ಪೊಲೀಸರು ಧರಿಸುವ ನೀಲಿ ಬಣ್ಣದ ಕ್ರೀಡಾ ಜರ್ಕಿನ್ ಧರಿಸಿದ್ದು ನೆನಪಿಗೆ ಬಂದಿದೆ. ಇದಲ್ಲದೆ ಇಫ್ರಾಜ್ ಎಸ್​ಐ ಜೊತೆ ಮಾತನಾಡುವಾಗ ಪೇದೆ ಕೊಟ್ರೇಶ್​ ಬಾಗಿಲು ಬಳಿ ನಿಂತು ಮಾತುಗಳನ್ನ ಕದ್ದು ಆಲಿಸುವದು ಗಮನಕ್ಕೆ ಬಂದಿದೆ.

ಇವೆಲ್ಲದ್ದಕಿಂತ ಹೆಚ್ಚು ಕೊಟ್ರೇಶ್​ ಪತ್ನಿ ಆಯಿಷಾಳ ತಂದೆ – ತಾಯಿ ನೆಲೆಸಿರುವ ಕಟ್ಟಡದಲ್ಲೇ ಬಾಡಿಗೆ ಇದ್ದಾನೆ. ಹೀಗಾಗಿ ತನ್ನ ಮೇಲೆ ದಾಳಿ ಮಾಡಿದ್ದು ಈತನೇ ಎಂಬುದು ಇಫ್ರಾಜ್​ಗೆ ಸ್ಪಷ್ಟವಾಗಿದೆ. ಈ ವಿಚಾರವನ್ನು ಎಸ್​ಐಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೊಟ್ರೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಕೊಟ್ರೇಶ್​ ಮತ್ತು ಪ್ರೇಯಸಿ ಆಯಿಷಾಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಾವೇರಿ ಮೂಲದ ಕೊಟ್ರೇಶ್​ಗೆ ಮದುವೆ ಫಿಕ್ಸಾ​ಗಿದೆಯಂತೆ. ಆದರೆ ಇಲ್ಲಿ ಪರಸ್ತ್ರೀ ಸಹವಾಸ ಮಾಡಿ ಜೈಲು ಪಾಲಾಗಿದ್ದಾನೆ. ಕೊಡಗಿನ ಖಡಕ್ ಎಸ್ಪಿ ರಾಮರಾಜನ್ ಅವರ ಕರ್ತವ್ಯಪರತೆಯಿಂದಾಗಿ ಪ್ರಕರಣ ಬಯಲಾಗಿದೆ. ಪ್ರಕರಣದ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಇಫ್ರಾಜ್ ಕುಟುಂಬ ಮನವಿ ಮಾಡಿದೆ.

Leave a Reply

Your email address will not be published. Required fields are marked *