ಸುದ್ದಿ ಸಂಗ್ರಹ ಕಲಬುರಗಿ
ಜೂನ್ 10ರಿಂದ ಆರಂಭವಾಗಲಿರುವ ಕಲಬುರಗಿ– ಬೆಂಗಳೂರು ಸ್ಟಾರ್ ಏರ್ ವಿಮಾನ ಸಂಚಾರದ ಸಮಯವನ್ನು ಸಂಜೆ ವೇಳೆಯಿಂದ ಬೆಳಗಿನ ವೇಳೆಗೆ ಬದಲಾವಣೆ ಮಾಡಲಾಗಿದೆ.
ಸಮಯ ಬದಲಾವಣೆ ಕುರಿತು ಸ್ಟಾರ್ ಏರ್ ಸಂಸ್ಥೆಯವರು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಗೆ ಮಾಹಿತಿ ನೀಡಿರುವುದಾಗಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ್ ವಿ ಇಂಗಿನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಿತ್ಯ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ. ಬೆಳಿಗ್ಗೆ 8.10ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 9.20ಕ್ಕೆ ಬೆಂಗಳೂರು ತಲುಪಲಿದೆ. ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರು, ಉದ್ಯಮಿಗಳು ಹಾಗೂ ಪ್ರಯಾಣಿಕರಿಂದ ಬಂದ ಬೇಡಿಕೆ ಮತ್ತು ಕೆಕೆಸಿಸಿಐ ಮನವಿ ಹಿನ್ನೆಲೆಯಲ್ಲಿ ಬೆಳಗಿನ ವಿಮಾನ ಸಂಚಾರವನ್ನು ನಿಗದಿಪಡಿಸಲಾಗಿದೆ. ಪ್ರಯಾಣಿಕರ ಬೇಡಿಕೆ ಗಮನದಲ್ಲಿಟ್ಟುಕೊಂಡು ಬೆಳಗಿನ ಸಂಚಾರದ ಜೊತೆಗೆ ಸಂಜೆಯೂ ವಿಮಾನ ಸಂಚಾರ ಆರಂಭಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಕಲಬುರಗಿಯಿಂದ ಇನ್ನಷ್ಟು ನಗರಗಳಿಗೆ ವಿಮಾನಯಾನ ಸಂಪರ್ಕ ವಿಸ್ತರಣೆ ಆಗಬೇಕು ಮತ್ತು ಹೆಚ್ಚಿನ ವಿಮಾನ ಸೇವೆಗಳು ಲಭ್ಯವಾಗಬೇಕು ಎಂದು ಆಶಿಸಿದ್ದಾರೆ.