ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ಮೂರನೇ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ಕೈದಿ ಮಸ್ತಾನ್ ಕಮಲಾಪುರ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಅವಿತುಕೊಂಡಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಸ್ತಾನ್ ಕಮಲಾಪುರೆಯನ್ನು ಬಂಧಿಸಿದ್ದಾರೆ. ಮಸ್ತಾನ್, ಪೊಕ್ಸೊ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಇದರೊಂದಿಗೆ ಕಲಬುರಗಿ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪುನಃ ಬಂಧಿಸಿದಂತಾಗಿದೆ. ಮೂವರು ಕೈದಿಗಳು ಜುಲೈ 14ರಂದು ಜೈಲಿನ ಕಾಂಪೌಂಡ್‌ನಿಂದ ಜಿಗಿದು ಪರಾರಿಯಾಗಿದ್ದರು. ಅದೆ ದಿನ ಔರಾದ್ ತಾಲೂಕಿನ ಸಂತಪುರ ಗ್ರಾಮದ ಸಂತೋಷ್ ಮೇತ್ರೆಯನ್ನು ಪೊಲೀಸರು ಬಂಧಿಸಿದ್ದರು. ಬೀದರ್ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ್ ಭೀಮರಾಯ ಎಂಬಾತನನ್ನು ಜುಲೈ 18ರಂದು ಭಾಲ್ಕಿ ಪಟ್ಟಣದಲ್ಲಿ ಬಂಧಿಸಲಾಗಿತ್ತು.