ಸುದ್ದಿ ಸಂಗ್ರಹ ಕಲಬುರಗಿ
ಆಧ್ಯಾತ್ಮಿಕ ಪ್ರವಚನದ ಮೂಲಕ ಅಸಂಖ್ಯಾತ ಜನರ ಮನಸ್ಸನ್ನು ಸುಧಾರಿಸಿ ಎರಡನೆ ವಿವೇಕಾನಂದ, ‘ನಡೆದಾಡುವ ದೇವರು’, ‘ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ’ ಸಿದ್ಧೇಶ್ವರ ಸ್ವಾಮೀಜಿಯವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ಜಿಲ್ಲೆಯ ಜೇವರ್ಗಿ ಪಟ್ಟಣದ ಶಾಂತನಗರದ ದ್ರೋಣ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಸಿದ್ಧೇಶ್ವರ ಸ್ವಾಮಿಜಿಯ ತೃತೀಯ ಲಿಂಗೈಕ್ಯ ಸಂಸ್ಮರೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, ಪೂಜ್ಯರು ದೇಶ-ವಿದೇಶಗಳಲ್ಲಿ ಪ್ರವಚನ ನೀಡಿ ಜಗಪ್ರಸಿದ್ದರಾಗಿದ್ದಾರೆ. ಅಪಾರ ಭಕ್ತ ಸಾಗರವನ್ನು ಹೊಂದಿದ್ದಾರೆ. ಜಗತ್ತಿಗೆ ಬೇಕಿರುವದು ಸಿದ್ಧೇಶ್ವರ ಶ್ರೀ ನೀಡಿದ್ದಾರೆ. ಪ್ರೇಮ, ಕರುಣೆ, ಸಾಮರಸ್ಯ ವಿಶ್ವಕ್ಕೆ ಸಾರಿದ್ದಾರೆ. ಇಂದಿನ ಪ್ರಪಂಚಕ್ಕೆ ಶ್ರೀಗಳು ಹೇಳಿರುವ ಜ್ಞಾನದ ವಾಣಿ ದಾರಿ ದೀಪವಾಗಿದೆ. ಪೂಜ್ಯರು ಕಲಬುರಗಿಯಲ್ಲಿ ಪ್ರವಚನ ನೀಡಿದಾಗ, ಪ್ರವಚನ ಸೇವಾ ಸಮಿತಿಯಲ್ಲಿ ಸೇವೆ ಮಾಡಿ, ಪೂಜ್ಯರ ದರ್ಶನ, ಕೃಪಾರ್ಶಿವಾದ ಪಡೆದ ಸಂದರ್ಭ ಸ್ಮರಿಸಿದರು.
ಸಾಯಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಮೀನಪ್ಪ ಹೊಸಮನಿ, ಕೋಚಿಂಗ್ ಸಂಸ್ಥೆಯ ಮುಖ್ಯಸ್ಥ ಶರಣು ಬಿಲ್ಲಾಡ್ ಮಾತನಾಡಿ, ಮಾನವನ ಸಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ, ಸಾಮರಸ್ಯ, ಉತ್ತಮ ಆಚಾರ, ವಿಚಾರ, ಮೌಲ್ಯಗಳು ಶ್ರೀಗಳ ಪ್ರವಚನದಲ್ಲಿ ನೀಡಿ, ಮನುಕುಲಕ್ಕೆ ದಾರಿದೀಪವಾಗಿದ್ದವು. ಸಿದ್ಧೇಶ್ವರ ಸ್ವಾಮೀಜಿಯವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರಭು ಮಣ್ಣೂರ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿನಿಯರಾದ ಗೌತಮಿ ಮತ್ತು ಅನ್ನಪೂರ್ಣ ಸಿದ್ದೇಶ್ವರ ಸ್ವಾಮೀಜಿಯವರ ಉಪದೇಶದ ಶುಭಾಶಯ ಹೇಳಿದರು.