ಸಿಸಿ ರಸ್ತೆ ಕಾಮಗಾರಿ ನಿರ್ಮಾಣಗೊಂಡ ಒಂದೆ ವಾರದಲ್ಲಿ ಬಿರುಕು: ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಾಬಣ್ಣ ಭರಾಟೆ ಆಗ್ರಹ
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಸಿಸಿ
ರಸ್ತೆ ನಿರ್ಮಾಣಗೊಂಡ ಒಂದೇ ವಾರದಲ್ಲಿ ಬಿರುಕು
ಬಿಟ್ಟಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ
ಕಾರಣವಾಗಿದೆ. ಈ ಘಟನೆಯು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಕಳಪೆ ಕೆಲಸ ಎತ್ತಿ ತೋರಿಸುತ್ತದೆ. ಲೋಕೋಪಯೋಗಿ ಇಲಾಖೆಯಡಿ ಅಂದಾಜು 5 ಕೋಟಿ ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನದಿಂದ ಮಾತಾ ಮಾಣಿಕೇಶ್ವರಿ ದೇವಸ್ಥಾನದವರೆಗೆ ಕೈಗೊಂಡ ಸಿಸಿ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಕೋಲಿ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಸಾಬಣ್ಣ ಭರಾಟೆ ತಿಳಿಸಿದ್ದಾರೆ.
ಎಸ್ಟಿಮೇಟ್ ಪ್ರಕಾರ ಸಿಸಿ ರಸ್ತೆ ಕಾಮಗಾರಿ ಮಾಡದೇ
ಗುತ್ತಿಗೆದಾರರು ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ
ಮಾಡಿದ್ದಾರೆ, ರಸ್ತೆಗೆ ಬೇಕಾದ ಅಗತ್ಯ ಸಿಮೆಂಟ್,
ರಾಡ್ ಗಳು ಬಳಸಿಲ್ಲ ಹಾಗೂ ಕ್ಯೂರಿಂಗ್ ಸರಿಯಾಗಿ
ಮಾಡಿಲ್ಲ ಹೀಗಾಗಿ ಬರೀ ಆರೇಳು ದಿನಗಳಲ್ಲಿಯೇ
ರಸ್ತೆಯಲ್ಲಿ ಬಿರುಕು ಕಾಣಿಸುತ್ತಿದೆ. ಹೀಗಾಗಿ ಕೂಡಲೇ
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ
ಕಳಪೆ ಮಟ್ಟದ ಕಾಮಗಾರಿ ಪರಿಶೀಲಿಸಿ ಗುಣಮಟ್ಟದ
ಕಾಮಗಾರಿ ಮಾಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಕ್ಷೇತ್ರದ ಶಾಸಕರು ಹಾಗೂ
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್
ಖರ್ಗೆ ಅವರು ಕೋಟಿಗಟ್ಟಲೆ ಅನುದಾನ
ತರುತ್ತಿದ್ದಾರೆ. ಆದರೆ ಅಧಿಕಾರಗಳ ಹಾಗೂ
ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಅಭಿವೃದ್ಧಿ
ಕೆಲಸಗಳು ಕಳಪೆ ಮಟ್ಟದಲ್ಲಿ ನಡೆದು ಕ್ಷೇತ್ರಕ್ಕೆ ಕೆಟ್ಟ
ಹೆಸರು ಬರುತ್ತಿದೆ. ಈ ಕೂಡಲೇ ಇದರಲ್ಲಿ
ಭಾಗಿಯಾದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ
ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾಬಣ್ಣ
ಭರಾಟೆ ಒತ್ತಾಯಿಸಿದ್ದಾರೆ.