ಸುದ್ದಿ ಸಂಗ್ರಹ ಕಲಬುರಗಿ
ಭಾರತೀಯರ ಹೊಸ ವರ್ಷ ಯುಗಾದಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಕ್ಯಾಲೆಂಡರ್ ವರ್ಷವೆ ಹೊಸ ವರ್ಷವಾಗಿದೆ. ಎಲ್ಲೆಡೆ ವಿಪರೀತ ಪಟಾಕಿ ಸಿಡಿಸುವುದು, ಮಿತಿಮೀರಿ ಮದ್ಯ ಸೇವಿಸಿ ಕುಣಿದು ಕುಪ್ಪಳಿಸುವುದು, ಶಾಂತಿ-ಸಾಮರಸ್ಯ ಕದಡುವ ಸಂದರ್ಭ, ಪಟಾಕಿ ಸದ್ದಿನಲ್ಲಿ ಮಲೀನ ಹೊಗೆ ಸೇವಿಸುತ್ತ ಜನರು ಚಲಿಸುವಂತ ಸ್ಥಿತಿ, ಸಂಪೂರ್ಣ ಕುಡಿದು ವಾಹನ ಚಲಾಯಿಸಿ ಅಪಘಾತವಾಗಿ ನಿಧನ ಹಾಗೂ ಗಾಯವಾಗುವ ಪರಿಸ್ಥಿತಿ ಉಂಟು ಮಾಡದೇ, ಅರ್ಥಪೂರ್ಣ ಆಚರಣೆ ಇಂದಿನ ಅಗತ್ಯವಾಗಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಅಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ನಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹೊಸ ವರ್ಷದ ಮುನ್ನಾ ದಿನವಾದ ಬುಧವಾರ ಏರ್ಪಡಿಸಲಾಗಿದ್ದ ‘ಹೊಸ ವರ್ಷಾಚರಣೆ-2026: ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಚೇತನರು, ಅಂಧ, ಮೂಕ, ಕಿವುಡರು, ಬಡವರು, ನಿರ್ಗತಿಕರು, ಅಸಹಾಯಕರು, ರೈತರಿಗೆ ಸಹಾಯಹಸ್ತ ಚಾಚುವುದು, ಮಕ್ಕಳಿಗೆ ದೇಶಿಯ ಸಂಸ್ಕೃತಿ ಬಿಂಬಿಸುವುದು, ಯುವಕರಿಗೆ ಸೂಕ್ತ ಮಾರ್ಗದರ್ಶನ, ಹಿರಿಯರು, ವೃದ್ಧರು, ಹತಾಶೆರಾದವರಿಗೆ ಮಾನಸಿಕ ಧೈರ್ಯ ನೀಡುವುದು, ಸಸಿ ನೆಡುವುದು, ಪುಸ್ತಕ ವಿತರಿಸುವುದು, ದೋಷವುಳ್ಳ ವ್ಯಕ್ತಿಗಳ ಬಾಳಿನಲ್ಲಿ ಸಂತೋಷ ನೀಡುವ ಚಟುವಟಿಕೆ ಮಾಡುವುದು, ಎಲ್ಲರಲ್ಲಿ ಸಂಹಿಷ್ಣತೆ ಮೂಡುವಂತಹ ಕಾರ್ಯಗಳ ಮೂಲಕ ಹೊಸ ವರ್ಷ ಆಚರಿಸಿದ್ದೆ ಆದರೆ, ಅದು ನಿಜಕ್ಕೂ ಸಾರ್ಥಕ, ಅರ್ಥಪೂರ್ಣವಾಗಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಹೊಸ ವರ್ಷದ ಅಂಗವಾಗಿ ವಿದ್ಯಾರ್ಥಿಗಳು ಉನ್ನತ ಗುರಿ ನಿರ್ಧರಿಸಿ ಪ್ರಯತ್ನ ಮಾಡಬೇಕು. ಹೊಸ ಪುಸ್ತಕಗಳು ಖರೀದಿಸಿ ಓದಿ. ನಮ್ಮ ದೇಶ ಉನ್ನತವಾದ ಸಾಧನೆ ಮಾಡಲು ಪ್ರತಿಯೊಬ್ಬ ಭಾರತೀಯ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿಂತಕ ಡಾ.ರಾಜಶೇಖರ ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಮತ್ತು ವಿದ್ಯಾರ್ಥಿಗಳು ಇದ್ದರು.