ಸುದ್ದಿ ಸಂಗ್ರಹ ಯಾದಗಿರಿ
ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕತೆ ಹೆಚ್ಚಿಸಲು, ಶಾಲಾ ದಾಖಲಾತಿ ಹೆಚ್ಚಿಸಲು ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದರೆ ಈಗ ಸರ್ಕಾರ ನೀಡುವ ಬಿಸಿಯೂಟ ಭಾಗ್ಯದಲ್ಲಿ ಬರಿ ಹುಳು ಭಾಗ್ಯವೆ ಹೆಚ್ಚಾಗಿದೆ. ಕೋಟ್ಯಾಂತರ ರೂಪಾಯಿ ಯೋಜನೆಯು ಸಮರ್ಪಕವಾಗಿ ನಿರ್ವಹಿಸದೆ ನಿರ್ಲಕ್ಷ್ಯ ತೋರಲಾಗಿದೆ. ಶಾಲೆಗಳಿಗೆ ಕಳಪೆ ಆಹಾರ ಧಾನ್ಯ ನೀಡಲಾಗುತ್ತಿದ್ದು, ಮಕ್ಕಳು ಶಾಲೆಗೆ ಬರೋದಕ್ಕೆ ಹಿಂದೇಟು ಹಾಕುವಂತಾಗಿದೆ.
ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಧಾನ್ಯ ವಿತರಣೆ ಮಾಡಿ ಉತ್ತಮ ಪೌಷ್ಟಿಕ ಆಹಾರ ನೀಡಬೇಕು. ಆದರೆ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಸರಿಯಾಗಿ ಜಾರಿಗೆ ತರದೆ ನಿರ್ಲಕ್ಷ್ಯ ತೋರಿದೆ.
ಯಾದಗಿರಿ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಳಪೆ ಆಹಾರ ಧಾನ್ಯ ವಿತರಣೆ ಮಾಡಿದ್ದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಹಾಗೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಪ್ರತಿ ತಿಂಗಳು ಬಿಸಿಯೂಟ ಯೋಜನೆಗೆ ಕೋಟ್ಯಾಂತರ ವೆಚ್ಚ ಮಾಡುತ್ತದೆ. ಆದರೆ ಶಾಲಾ ಮಕ್ಕಳಿಗೆ ಗುಣಮಟ್ಟದ ಊಟ ನೀಡದೆ ಹುಳು ಇರುವ ಊಟ ವಿತರಣೆ ಮಾಡಲಾಗುತ್ತಿದೆ. ಯಾದಗಿರಿ ನಗರದ ಕೋಳಿವಾಡ ಹಾಗೂ ಬಂದಳ್ಳಿ ಸೇರಿದಂತೆ ಅನೇಕ ಶಾಲೆಯಲ್ಲಿ ಕಳಪೆ ಆಹಾರ ಧಾನ್ಯ ಇರುವುದು ಕಂಡು ಬಂದಿದೆ.
ಶಾಲೆಯಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕರು ಹುಳು ಇರುವ ಆಹಾರ ಧಾನ್ಯ ಸ್ವಚ್ಛತೆ ಮಾಡಿ ನಂತರ ಅಡುಗೆ ಮಾಡುವಂತಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಗುಣಮಟ್ಟದ ಊಟ ಸಿಗುತ್ತವೆ ಎಂಬ ಆಶಾ ಭಾವನೆಯಿಂದ ಮಕ್ಕಳಿಗೆ ಶಾಲೆಗೆ ಕಳುಹಿಸುತ್ತಾರೆ. ಆದರೆ ಶಿಕ್ಷಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ಮರಿಚಿಕೆಯಾಗಿದೆ. ಅದೆ ರೀತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಗುಣಮಟ್ಟದ ಆಹಾರ ಸಿಗುವುದು ಮರಿಚಿಕೆಯಾಗಿದೆ.