ಕಲಬುರಗಿ SBI ಎಟಿಎಂ ದರೋಡೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧನ

ಜಿಲ್ಲೆ

ಕಲಬುರಗಿ: ನಗರದ ರಿಂಗ್ ರಸ್ತೆಯ SBI ಎಟಿಎಂ ಧ್ವಂಸಗೊಳಿಸಿ ದರೋಡೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಸಬರ್ಬನ್ ಠಾಣೆಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಹರಿಯಾಣ ಮೂಲದ ದರೋಡೆ ಪ್ರಕರಣದ ಆರೋಪಿಗಳಾದ ತಸ್ಲೀಮ್ (28) ಮತ್ತು ಷರೀಫ್ ( 22) ಗಾಯಗೊಂಡವರು. ಜಿಮ್ಸ್ ಆವರಣದ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಬುರಗಿಯ ಬೇಲೂರ ಕ್ರಾಸ್ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಕಾನ್‌ಸ್ಟೆಬಲ್‌ಗಳಾದ ಮಂಜು, ಫಿರೋಜ್ ಮತ್ತು ರಾಜಕುಮಾರ ಮೇಲೆ ದಾಳಿ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶರಣಾಗುವಂತೆ ಸೂಚಿಸಿದರು ಆರೋಪಿಗಳು ದಾಳಿ ನಡೆಸುತ್ತಿದ್ದರು. ಅನಿವಾರ್ಯವಾಗಿ ಆತ್ಮರಕ್ಷಣೆಗೆ ಸಬರ್ಬನ್ ಠಾಣೆಯ ಸಿಪಿಐ ಸಂತೋಷ ತಟ್ಟೆಪಲ್ಲಿ ಹಾಗೂ ಪಿಎಸ್‌ಐ ಬಸವರಾಜ ಅವರು ತಸ್ಲೀಮ್ ಮತ್ತು ಷರೀಫ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕಾನ್‌ಸ್ಟೆಬಲ್‌ಗಳು ಹಾಗೂ ಗುಂಡೆಟು ತಿಂದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಬಂಧಿತ ದರೋಡೆಕೋರರಾದ ತಸ್ಲೀಮ್ ವಿರುದ್ಧ 8 ಹಾಗೂ ಷರೀಫ್ ವಿರುದ್ಧ 3 ಪ್ರಕರಣಗಳು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಎಟಿಎಂ ದರೋಡೆ ಸಂಬಂಧ ಪ್ರಕರಣಗಳು ದಾಖಲಾಗಿವೆ.

ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರದಲ್ಲಿ ಏಪ್ರಿಲ್ 9ರಂದು ಇದೆ ಆರೋಪಿಗಳು SBI ಎಟಿಎಂ ಕೇಂದ್ರಕ್ಕೆ ನುಗ್ಗಿ, ಎಟಿಎಂ ಯಂತ್ರ ಧ್ವಂಸಗೊಳಿಸಿ 18 ಲಕ್ಷ ರೂ ದರೋಡೆ ಮಾಡಿದ್ದರು.

Leave a Reply

Your email address will not be published. Required fields are marked *