ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ತಾಯಿ ಆಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಕಳೆದ 3 ವರ್ಷಗಳಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ 2,320 ಪ್ರಕರಣಗಳು ಬಂದಿವೆ. ಅಷ್ಟೆ ಅಲ್ಲದೆ, ಕಳೆದ 10 ತಿಂಗಳಲ್ಲಿ 749 ಪ್ರಕರಣಗಳು ವರದಿಯಾಗಿವೆ.
2,320 ಪ್ರಕರಣಗಳ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 163 ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಕೇಸ್ ದಾಖಲಾಗಿದೆ. ತುಮಕೂರು ಜಿಲ್ಲೆಯಲ್ಲಿ 113 ಪ್ರಕರಣಗಳು ದಾಖಲಾಗಿವೆ.
ಯಾವ ವರ್ಷದಲ್ಲಿ ಎಷ್ಟು ?
2022-23 – 405
2023-24 – 709
2024-25 – 685
2025-26 – 521
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ ?
ಬೆಂಗಳೂರು ದಕ್ಷಿಣ: 108
ಬೆಂಗಳೂರು ಗ್ರಾಮಾಂತರ – 47
ಬೆಳಗಾವಿ- 64
ಚಾಮರಾಜನಗರ -109
ಚಿಕ್ಕಮಗಳೂರು- 135
ದಕ್ಷಿಣ ಕನ್ನಡ- 74
ಹಾವೇರಿ- 126
ಕೋಲಾರ- 115
ಕೊಪ್ಪಳ- 127
ಮೈಸೂರು- 114
ಶಿವಮೊಗ್ಗ- 163
ತುಮಕೂರು- 113
ತಡೆಯಲು ಏನು ಕ್ರಮ ?
ಸರ್ಕಾರದ ಆದೇಶದಂತೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಬಾಲ ಗರ್ಭಿಣಿಯರಾಗುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ರಚಿಸಲಾಗಿದ್ದು, ಈ ಪ್ರಕರಣಗಳ ಕುರಿತು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.
ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಭಾಗೀದಾರರು, ಶಾಲಾ ಮಕ್ಕಳನ್ನೊಳಗೊಂಡಂತೆ ಸಾರ್ವಜನಿಕರು ಪ್ರಯೋಜನ ಪಡೆದಿರುತ್ತಾರೆ.
ಪಾಲನೆ/ ಪೋಷಣೆ ಅವಶ್ಯಕತೆ ಇರುವ ಮಕ್ಕಳ ಸುರಕ್ಷತೆ ಮತ್ತು ಪುನರ್ವಸತಿಗಾಗಿ ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.
ಸಂತ್ರಸ್ತರಿಗೆ ಕಾನೂನು ಸಲಹೆ
ಸಂತ್ರಸ್ಥ ಮಗುವಿಗೆ ಕಾನೂನು ಸಲಹೆ ಮತ್ತು ಅಪ್ತ ಸಮಾಲೋಚನೆಗಾಗಿ ಪ್ರತಿ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಪ್ರಸ್ತುತ 173 ಬೆಂಬಲ ವ್ಯಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಕ್ರಮಬದ್ಧ ಕಾರ್ಯ ವಿಧಾನ ರಚನೆಯಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ಕಾರ್ಯ ನಿರ್ವಹಿಸಲು ಈಗಾಗಲೆ ತಿಳಿಸಲಾಗಿದೆ.
ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸಂತ್ರಸ್ಥೆಗೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಹಾಗೂ 23 ವರ್ಷದ ವರೆಗೂ ಅವಶ್ಯಕ ಬೆಂಬಲ ನೀಡಲಾಗುವುದು. ಸಂತ್ರಸ್ಥೆಗೆ ಆರೋಗ್ಯ ಸೇವೆ ಮತ್ತು ವೈದ್ಯಕೀಯ ತಪಾಸಣೆಗೆ ಒಂದು ಬಾರಿಗೆ ರೂ.6,000 ಹಾಗೂ ಶಿಕ್ಷಣ ಮುಂದುವರೆಸಲು ಇಚ್ಚಿಸಿದಲ್ಲಿ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳಿಗೆ ರೂ.4,000ಗಳಂತೆ 18 ವರ್ಷ ಪೂರ್ಣಗೊಳ್ಳುವವರೆಗೂ ಆರ್ಥಿಕ ಸೌಲಭ್ಯ ಒದಗಿಸಲಾಗುತ್ತಿದೆ.