ಸುದ್ದಿ ಸಂಗ್ರಹ ಕಲಬುರಗಿ
ಕಡಲೆ ಬೆಳೆ ದ್ವಿದಳ ಹಾಗೂ ಹಿಂಗಾರು ಬೆಳೆಯಾಗಿದೆ. ಬೆಳೆಯ ಉತ್ತಮ ಇಳುವರಿಗಾಗಿ ಸಮಗ್ರ ನಿರ್ವಹಣಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್ ಬಿರಾದಾರ ಹೇಳಿದರು.
ಕಮಲಾಪುರ ತಾಲೂಕಿನ ಶಿರಗಾಪುರ ಗ್ರಾಮದ ಈರಣ್ಣ ಬಿರಾದಾರ ಅವರ ಕಡಲೆ ಹೊಲದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ “ಕಡಲೆ ಬೆಳೆ ಕ್ಷೇತ್ರ ಭೇಟಿ ಮತ್ತು ನಿರ್ವಹಣೆ ಕ್ರಮ” ಕಾರ್ಯಕದಲ್ಲಿ ಬೆಳೆ ವೀಕ್ಷಿಸಿ, ನಂತರ ಮಾತನಾಡಿದ ಅವರು, ಹಿಂಗಾರು ಹಂಗಾಮಿನ ಬೆಳೆ ಕಡಲೆ ಹೆಚ್ಚಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಕಾಯಿಕೊರಕ ಕೀಟ ಬಾಧೆ, ಸಿಡಿ ರೋಗ, ತುಕ್ಕು ರೋಗ ಮತ್ತು ಅನಿಯಮಿತ ಮಳೆಯಿಂದ ಇಳುವರಿ ಕಡಿಮಯಾಗುತ್ತಿದೆ. ಆದ್ದರಿಂದ ಉತ್ಪಾದಕತೆ ಹೆಚ್ಚಿಸಲು ಸಮಗ್ರ ವೈಜ್ಞಾನಿಕ ನಿರ್ವಹಣೆ ಮಾಡಬೇಕು. ಬಿತ್ತನೆಯ ನಂತರ 30-35 ದಿವಸಗಳೊಳಗೆ ಕುಡಿ ಚಿವುಟುವಿಕೆ ಕೈಗೊಳ್ಳಬೇಕು. ಇದರಿಂದ ಕವಲೊಡಿಯುವಿಕೆ ಹೆಚ್ಚಾಗಿ, ಇಳುವರಿ ಅಧಿಕವಾಗುತ್ತದೆ. ಕಡಲೆ ಬಳೆಯಲು ಶೀತ ಮತ್ತು ಶುಷ್ಕವಾದ ವಾತಾವರಣ ಸಹಕಾರಿ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಸಮಾಜ ಸೇವಕ ಶರಣು ಎ.ಕಮಠಾಣ, ರೈತರಾದ ಶರಣಬಸಪ್ಪ ಪೂಜಾರಿ, ಶಂಭುಲಿಂಗಪ್ಪ ಪಾಟೀಲ್, ಪ್ರಮುಖರಾದ ವೀರಣ್ಣ ವಿಶ್ವಕರ್ಮ, ನಿಲೇಶ್, ಸ್ನೇಹಾ, ಅಜಯ್, ವೀರೇಶ್ ಸೇರಿದಂತೆ ಅನೇಕರು ಇದ್ದರು.