ʻಬಿಗ್ ಬಾಸ್ ಕನ್ನಡ 12’ ಅಂದರೆ, ಬರಿ ಜಗಳ ಎನ್ನುವ ರೀತಿ ಆಗಿಬಿಟ್ಟಿದೆ. ಅದರಲ್ಲೂ ಕೆಟ್ಟ ಪದ ಬಳಕೆ ಮಾಡುವದರ ಬಗ್ಗೆ, ಸ್ಪರ್ಧಿಗಳ ನಡವಳಿಕೆ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಹೆಚ್ಚಾಗಿವೆ. ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಾಗೂ ಅನುಭವ ಹಂಚಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಇದೆ ಡಿಸೆಂಬರ್ 25ಕ್ಕೆ ತೆರೆ ಕಾಣಲಿದ್ದು, ಸಿನಿಮಾದ ಪ್ರಮೋಷನ್‌ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ರಿಪಬ್ಲಿಕ್ ಕನ್ನಡ ಸಂದರ್ಶನದಲ್ಲಿ, ಈ ಸೀಸನ್‌ನಲ್ಲಿ ಕೆಲವು ಸ್ಪರ್ಧಿಗಳು ಕಂಟ್ರೋಲ್ ಮೀರಿ ನಡೆದುಕೊಂಡರು ಎಂದು ಅನಿಸುತ್ತದೆಯೆ ? ಎಂದು ಕೇಳಲಾಗಿದೆ. ಇದಕ್ಕೆ ಸುದೀಪ್ ಉತ್ತರಿಸುತ್ತಾ, ಹೌದು ಅನಿಸಿದೆ. ಅನಿಸೋದು ಅಷ್ಟೆ ಅಲ್ಲ, ಕಾಣಿಸುತ್ತೆ ಕೆಲವೊಮ್ಮೆ. ಅದೆ ಬಿಗ್ ಬಾಸ್ ಅಲ್ವಾ ? ಎಲ್ಲಾ ತರಹದ ವ್ಯಕ್ತಿಗಳು ಅಲ್ಲಿ ಹೋಗ್ತಾರೆ. ನಾವು ಅದನ್ನು ಹೇಗೆ ಹ್ಯಾಂಡಲ್ ಮಾಡ್ತಿವಿ ? ಆ ಮಧ್ಯದಲ್ಲಿ ಒಬ್ಬ ಚೆನ್ನಾಗಿ ಆಟ ಆಡಿ ಗೆಲ್ತಾನೆ ಅಲ್ವಾ ? ಅದಕ್ಕೆ ಅಲ್ವಾ ಬಿಗ್ ಬಾಸ್ ವಿನ್ನರ್ ಅಂತ ಹೇಳೋದು. ಬಿಗ್ ಬಾಸ್ ಗೆಲ್ಲೋದು ಒಂದು ಪರ್ಸನಾಲಿಟಿ ಎಂದರು.
ಮುಂದುವರೆದು, ಹಿಂದಿನ ಸೀಸನ್‌ಗಳ ಉದಾಹರಣೆ ನೀಡುತ್ತಾ, ಶ್ರುತಿ ಮೇಡಂ ಅವರ ಸೀಸನ್‌ಗೆ ಹೋಗೋದಾದ್ರೆ, ಎಷ್ಟು ಕಿರುಚಾಡಿ, ಕೂಗಾಡಿದ್ದರು ಸ್ಪರ್ಧಿಗಳು. ಆದರೆ ಶ್ರುತಿ ಅವರು ಸುಮ್ಮನೆ ಕೂತಿದ್ದರು. ಆಟವೂ ಆಡಿದ್ದರು. ಬಂದವರೆಲ್ಲರು, ಇದು ನಾವು ನೋಡಿರುವ ಶ್ರುತಿ ಅಲ್ಲ, ಶ್ರುತಿನೆ ಬೇರೆ ಅಂತ್ಹೇಳಿ, ಅದರಲ್ಲೆ ಜೀವನ ಕಳೆದುಕೊಂಡು ಹೋದರು. ಶ್ರುತಿ ಅವರು ಟ್ರೋಫಿ ಗೆದ್ದುಕೊಂಡು ಹೋದರು. ಹನುಮಂತು 50 ದಿನಗಳಾದ್ಮೇಲೆ ಬಂದಿರ್ಬಬಹುದು. ಎಷ್ಟು ನೀಟಾಗಿ ಗೆದ್ದುಕೊಂಡು ಹೋದರು. ʻಬಿಗ್ ಬಾಸ್ʼ ಸುಮ್ಮನೆ ಗೆಲ್ಲೋಕೆ ಆಗಲ್ಲ. ಇಲ್ಲಿ ಬೇರೆ ಬೇರೆ ರೀತಿ ಗಲಾಟೆಗಳು ನಡೆಯುತ್ತಲೆ ಇರುತ್ತೆ. ಆದರೆ ಈ ವರ್ಷ ಸ್ವಲ್ಪ ಜಾಸ್ತಿನೆ ಆಯ್ತು. ಆದರೆ ಈ ರೀತಿ ಆಗ್ತಿರೋದು ಇದೆನು ಮೊದಲನೆ ಸೀಸನ್ ಅಲ್ಲ. ಹಿಂದೆ ಒಂದೆಡ್ಮೂರು ಸೀಸನ್ ಹೀಗೆ ಆಗಿದೆ, ಬರಿ ಗಲಾಟೆ. ಈ ಮಧ್ಯದಲ್ಲೂ ಒಂದು ಶೋ ನಡೆಸಿಕೊಡಬೇಕು, ಈ ಮಧ್ಯದಲ್ಲೂ ಒಂದು ನಗು ತರ್ಬೇಕು ಎನ್ನುವ ಯತ್ನಗಳಿರುತ್ತವೆ. ನಡೀತಾ ಇರುತ್ತವೆ ಎಂದು ಸುದೀಪ್ ಹೇಳಿದ್ದಾರೆ.
ಇದರ ಜೊತೆಗೆ, ಪ್ರೀ ಡಿಸೈಡೆಡ್ ವಿನ್ನರ್ ಇದ್ದಾರೆ ಎಂಬ ಆರೋಪಗಳ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿ, ನಾವು ಸೋಶಿಯಲ್ ಮೀಡಿಯಾ ಅಥವಾ ರಿಯಾಲಿಟಿ, ಯಾವುದರಲ್ಲಿ ಇಂಟ್ರೆಸ್ಟೆಡ್ ಇದ್ದೆವೆ ? ಎಂದು ಪ್ರಶ್ನಿಸಿದ ಕಿಚ್ಚ, ಸಾಮಾಜಿಕ ಮಾಧ್ಯಮ ಬಿಟ್ಟು ಬಿಗ್ ಬಾಸ್ ನೋಡೋಣ ಎಂದು ಹೇಳಿದ್ದಾರೆ.