ಸುದ್ದಿ ಸಂಗ್ರಹ ಕಲಬುರಗಿ
ಇಂಧನ ಕಡಿಮೆ ಬಳಸುವುದರಿಂದ ಹಣ ಉಳಿತಾಯ, ವ್ಯವಹಾರ ಹಾಗೂ ಕುಟುಂಬಗಳಿಗೆ ಆರ್ಥಿಕವಾಗಿ ಲಾಭದಾಯಕವಾಗಿದೆ. ದೇಶ ಸ್ವಾವಲಂಬನೆ ಸಾಧಿಸಲು ಮತ್ತು ಅಭಿವೃದ್ಧಿಗೆ ಇಂಧನ ಸಂರಕ್ಷಣೆ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ರಾಷ್ಟ್ರೀಯ ಇಂಧನ ಸಂರಕ್ಷಣೆ ಸಪ್ತಾಹ ಹಾಗೂ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ವಾಕಿಂಗ್ ಅಥವಾ ಸೈಕಲ್ ಬಳಸಿ, ಸಾರ್ವಜನಿಕ ಸಾರಿಗೆ ಬಳಸಿ, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆ ಕಡಿಮೆ ಮಾಡಬೇಕು. LED ಬಲ್ಬ್‌ಗಳು ಬಳಸಿ, ಎಸಿ ಮತ್ತು ರೆಪ್ರಿಜರೇಟರ್ ಬಳಕೆ ಕಡಿಮೆ ಮಾಡಿ, ಸೌರ ಶಕ್ತಿ, ಪವನ ಶಕ್ತಿ ಬಳಸಬೇಕು ಎಂದರು.
ವಾಹನಗಳ ಏರ್ ಫಿಲ್ಟರ್‌ಗಳನ್ನು ಸ್ವಚ್ಛವಾಗಿಡಿ, ಗೃಹೋಪಯೋಗಿ ವಸ್ತುಗಳನ್ನು ಪೂರ್ಣ ಲೋಡ್‌ನಲ್ಲಿ ಬಳಸುವ ಮೂಲಕ ಇಂಧನ ದಕ್ಷತೆ ಹೆಚ್ಚಿಸಬೇಕು. ಇಂಧನ ಸಂರಕ್ಷಣೆ ಕೇವಲ ಒಂದು ವೈಯಕ್ತಿಕ ಅಭ್ಯಾಸವಲ್ಲ, ಬದಲಾಗಿ ಒಂದು ಜವಾಬ್ದಾರಿಯುತ ಸಾಮಾಜಿಕ ಮತ್ತು ರಾಷ್ಟ್ರೀಯ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ, ಶಿಕ್ಷಕಿ ಮಂಜುಳಾ ನರೋಣಾ, ಸೇವಕಿ ಸಿದ್ದಮ್ಮ ಕೌಂಟೆ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.