ಕಲಬುರಗಿ: ಪರಮಾಣು ಶಕ್ತಿ ಬಳಸಿ ವಿದ್ಯುಚ್ಛಕ್ತಿ ಉತ್ಪಾದನೆ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಇನ್ನಿತರ ಅಭಿವೃದ್ಧಿಗೆ ಬಳಸಿದರೆ, ನಾಶವಾಗುವುದು ತಪ್ಪುತ್ತದೆ ಮತ್ತು ರಾಷ್ಟ್ರದ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಹಿರೋಷಿಮಾ ಮತ್ತು ನಾಗಾಸಾಕಿ ಕರಾಳ ದಿನಾಚರಣೆ’ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಮಾಣು ಶಕ್ತಿ ಬಳಸಿಕೊಂಡು ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ದಾಳಿಮಾಡುವ ಮೂಲಕ ಅನೇಕ ಜನರ ಸಾವಿಗೆ ಕಾರಣವಾದದ್ದು ಮರೆಯುವಂತಿಲ್ಲ. ಇದು ಮಾನವನಿಗೆ ಒಂದು ಪಾಠವಾಗಿದೆ ಎಂದರು.
ಯುದ್ದದಿಂದ ಯಾವುದೆ ರಾಷ್ಟ್ರವು ಪ್ರಗತಿ ಕಾಣಲು ಸಾಧ್ಯವಿಲ್ಲ. ಬದಲಿಗೆ ಪರಸ್ಪರ ಪ್ರೀತಿ, ಸ್ನೇಹ, ಸಹಕಾರ ಮನೋಭಾವನೆಯಿಂದ ಕಾರ್ಯನಿರ್ವಹಿಸದರೆ, ದೇಶದಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿಯಾಗುತ್ತದೆ. ಇದನ್ನು ಪ್ರತಿಯೊಂದು ದೇಶವು ಅರ್ಥಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಪರಮಾಣು ಶಕ್ತಿಯು ಬಹುವಿಧ ಉಪಯೋಗ ಹೊಂದಿದ್ದು, ಅದನ್ನು ಸಂಪೂರ್ಣವಾಗಿ ಶಾಂತಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಉಪಯೋಗಿಸಬೇಕಾದದ್ದು ತುಂಬಾ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ ಮತ್ತು ವಿದ್ಯಾರ್ಥಿಗಳು ಇದ್ದರು.