ರಾಯಚೂರಿನಲ್ಲಿ ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಕುಸಿತ: ಇನ್ನೂ 5 ದಿನ ಮುಂದುವರಿಯಲಿದೆ ಚಳಿ ಅಬ್ಬರ

ಜಿಲ್ಲೆ

ಸುದ್ದಿ ಸಂಗ್ರಹ ರಾಯಚೂರು
ಜಿಲ್ಲೆಯಲ್ಲಿ ಈ ಬಾರಿ ದಾಖಲೆ ಮಟ್ಟದ 9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತಂಪುಗಾಳಿಗೆ ಬಿಸಿಲು ನಾಡಿನ ಜನ ಥಂಡಾ ಹೊಡೆದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ, ಇನ್ನೂ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಚಳಿಯದ್ದೆ ಅಬ್ಬರ ಮುಂದುವರಿಯಲಿದೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಯಚೂರಿನಲ್ಲಿ ಎರಡು ದಿನ ಹಗುರ ಮಳೆ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28 ರಿಂದ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 10 ರಿಂದ 7 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ರೈತರ ಕೃಷಿ ಚಟುವಟಿಕೆಗಳ ಮೇಲೂ ಚಳಿಯ ಎಫೆಕ್ಟ್ ಬೀರುತ್ತಿದ್ದು, ಬೆಳೆಗಳಿಗೆ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳೆಗಳಿಗೆ ಪೋಷಕಾಂಶಗಳ ಸಿಂಪಡಣೆ ಮಾಡುವಂತೆ ರಾಯಚೂರು ಕೃಷಿ ವಿವಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಜನರ ಆರೋಗ್ಯದ ಮೇಲೂ ಚಳಿ ಪರಿಣಾಮ ಬೀರುತ್ತಿದ್ದು ಬೆಳಗಿನ ಜಾವ ವಾಕಿಂಗ್ ತಡವಾಗಿ ಆರಂಭಿಸಲು ಸಾರ್ವಜನಿಕರಿಗೆ ವೈದ್ಯರ ಸೂಚನೆ ನೀಡುತ್ತಿದ್ದಾರೆ. ಚಿಕ್ಕಮಕ್ಕಳು ವೃದ್ದರು ಹೆಚ್ಚು ಬೆಚ್ಚಗಿನ ಬಟ್ಟೆ ಧರಿಸಲು ಸೂಚಿಸಿದ್ದಾರೆ. ಚಳಿಯಿಂದ ಹೃದಯಾಘಾತ, ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ಆದಷ್ಟು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಲು ಸಲಹೆ ನೀಡಿದ್ದಾರೆ.

ತೀವ್ರ ಚಳಿಯಿಂದಾಗಿ ಉದ್ಯಾನವನ , ಕ್ರೀಡಾಂಗಣಗಳು ವಾಕಿಂಗ್ ಬರುವ ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿವೆ. ಚಳಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಜನ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ.

Leave a Reply

Your email address will not be published. Required fields are marked *