ಸುದ್ದಿ ಸಂಗ್ರಹ ಕಲಬುರಗಿ
ಸಾರ್ವಭೌಮತ್ವ ರಕ್ಷಣೆ ತಟಸ್ಥತೆ ರಾಷ್ಟ್ರಗಳ ಸ್ವತಂತ್ರ ನೀತಿಗಳನ್ನು ಮತ್ತು ಸಾರ್ವಭೌಮತ್ವವನ್ನು ಎತ್ತಿ ತೋರಿಸುತ್ತದೆ. ವಿಶ್ವ ಶಾಂತಿಗಾಗಿ ತಟಸ್ಥ ನೀತಿಯ ಪಾಲನೆ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ತಟಸ್ಥ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ತಟಸ್ಥ ನೀತಿಯು ವಿಶ್ವ ಶಾಂತಿ, ಭದ್ರತೆ ಮತ್ತು ಸಹಕಾರವನ್ನು ಬಲಪಡಿಸುತ್ತದೆ. ದೇಶಗಳ ನಡುವಿನ ಸಂಘರ್ಷಗಳಲ್ಲಿ ಮಧ್ಯಪ್ರವೇಶಿಸದೆ, ಸಮಸ್ಯೆಗಳನ್ನು ಶಾಂತಿಯುತ ಪರಿಹಾರಕ್ಕೆ ಬೆಂಬಲ ನೀಡುತ್ತದೆ. ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಲು ಸಹಾಯ ಮಾಡುತ್ತೆ ಎಂದರು.
ತಟಸ್ಥ ನೀತಿಯು ಯಾವುದೆ ಗುಂಪಿಗೆ ಸೇರದೆ, ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ, ಮಾನವೀಯತೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ಇದು ಪ್ರೇರೇಪಿಸುತ್ತದೆ. 1995ರಲ್ಲಿ ವಿಶ್ವಸಂಸ್ಥೆಯಿಂದ ತಟಸ್ಥ ರಾಷ್ಟ್ರವೆಂದು ಗುರುತಿಸಲ್ಪಟ್ಟ ತುರ್ಕಮೆನಿಸ್ತಾನ್‌ನ ಈ ನೀತಿಯನ್ನು ಗೌರವಿಸಿ, ಡಿಸೆಂಬರ್-12ನ್ನು ಈ ದಿನವನ್ನಾಗಿ ಆಚರಿಸಲಾಗುತ್ತದೆ. ಪರಿಸರ ಸಮತೋಲ ಕಾಪಾಡಿಕೊಳ್ಳುವಲ್ಲಿ ತಟಸ್ಥತೆಯು ಒಂದು ಪಾತ್ರ ವಹಿಸುತ್ತದೆ. ಇದು ಜಾತಿಗಳು ಸ್ಪರ್ಧೆಯ ಒತ್ತಡವಿಲ್ಲದೆ ಅಥವಾ ಪರಸ್ಪರ ಪ್ರಯೋಜನಗಳ ಮೇಲೆ ಅವಲಂಬನೆಯಿಲ್ಲದೆ ಸಹಬಾಳ್ವೆ ನಡೆಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚು ನಿಷ್ಕ್ರಿಯ ರೀತಿಯ ಪರಸ್ಪರ ಕ್ರಿಯೆಯನ್ನು ಸೃಷ್ಟಿಸುತ್ತದೆ. ಅಲ್ಲಿ ಜಾತಿಗಳು ಇತರರ ಮೇಲೆ ಗಮನಾರ್ಹ ಪರಿಣಾಮ ಬೀರದೆ ತಮ್ಮ ಪರಿಸರ ಗೂಡುಗಳನ್ನು ಆಕ್ರಮಿಸಿಕೊಳ್ಳುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಚಿಂತಕ ಡಾ.ರಾಜಶೇಖರ ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹಾಗೂ ವಿದ್ಯಾರ್ಥಿಗಳು ಇದ್ದರು.