ಸುದ್ದಿ ಸಂಗ್ರಹ ಕಲಬುರಗಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆಯ ಪಿಂಚಣಿ ಯೊಜನೆ ಜಾರಿಗೊಳಿಸುವ ಸಂಬಂಧ ಸರ್ಕಾರ ರಚಿಸಿರುವ ಸಮಿತಿಯು ಈಗಾಗಲೆ ವರದಿ ಸಿದ್ಧಪಡಿಸಿದೆ, ಒಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಲಾಗಿದೆ. ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸುತ್ತದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ 2006 ರಿಂದ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್) ಹೋಗಲಾಡಿಸಿ, ಈ ಹಿಂದಿನ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವ ಸಂಬಂಧ, ಒಪಿಎಸ್ ಜಾರಿಗೊಳಿಸಿರುವ ದೇಶದ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿಯು ಈ ಕುರಿತ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ನೌಕರರ ಸಂಘ ಒತ್ತಾಯಿಸುತ್ತಲೆ ಬಂದಿತ್ತು. ಡಿ.3 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ನೇತೃತ್ವದ ನಿಯೋಗವು ಎನ್‍ಪಿಎಸ್ ಸಮಿತಿಯ ಸದಸ್ಯರು ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಟಿ ರೇಜು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ, ಸಮಿತಿಯು ಈಗಾಗಲೆ ವರದಿ ಸಿದ್ಧಪಡಿಸಿದ್ದು, ಒಂದು ವಾರದೊಳಗೆ ಸಮಿತಿಯು ಸಭೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ಒಪಿಎಸ್ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನೌಕರರ ಸಂಘವು ಮನವಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಹೇಶ್ ಹೂಗಾರ, ಶ್ರೀಮಂತ ಪಟ್ಟೇದಾರ, ಧರ್ಮರಾಯ ಜವಳಿ, ಚಂದ್ರಕಾಂತ ಏರಿ, ಎಂ.ಬಿ ಪಾಟೀಲ, ಸುರೇಶ ವಗ್ಗೆ, ನಿಜಲಿಂಗಪ್ಪ ಕೋರಳ್ಳಿ ಮತ್ತು ಸಿದ್ದಲಿಂಗಯ್ಯ ಮಠಪತಿ ಇದ್ದರು.