ಸುದ್ದಿ ಸಂಗ್ರಹ ಹಾಸನ
ಮಹಿಳೆ ಬದುಕಿರುವಾಗಲೆ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಲಪಟಾಯಿಸಿದ ಆರೋಪ ಸಕಲೇಶಪುರ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ.
ಗ್ರಾಮದ ಮಹಿಳೆ ಸಿದ್ದಮ್ಮ ಅವರ ಹೆಸರಿನಲ್ಲಿ ಸರ್ವೆ ನಂ.68 ರಲ್ಲಿ 1 ಎಕರೆ 20 ಗುಂಟೆ ಭೂಮಿ ಇದೆ. ಈ ಭೂಮಿಯನ್ನು ಬಾಳ್ಳುಪೇಟೆ ಗ್ರಾಮದ ಶೇಖ್ ಅಹಮದ್ ಎಂಬಾತ ದತ್ತು ಪುತ್ರ ಎಂದು ವಂಶ ವೃಕ್ಷ ಮಾಡಿಸಿ, 2008ರಲ್ಲೆ ಸಿದ್ದಮ್ಮ ವಿಲ್ ಮಾಡಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ. ಬಳಿಕ 2009ರ ಅ.4 ರಂದು ಮರಣ ಹೊಂದಿದಂತೆ ಮರಣ ಪ್ರಮಾಣ ಪತ್ರ ಮಾಡಿಸಿ ಭೂಮಿಯನ್ನು ಲಪಟಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶೇಖ್ ಅಹಮದ್ ವಿರುದ್ಧ ಮಹಿಳೆ ಸಿದ್ದಮ್ಮ ಹಾಗೂ ಪುತ್ರ ನಿಂಗರಾಜು ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಸಿದ್ದಮ್ಮ ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲು ನೆರವಾದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.