ಸುವರ್ಣ ವಿಧಾನಸೌಧ: ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6,500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.
ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆದಿರಲಿಲ್ಲ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದು, ಗ್ರಾಮ ಪಂಚಾಯ್ತಿಗಳ ಅವಧಿಯೂ ಮುಗಿಯುತ್ತಿದೆ. ಜಿ.ಪಂ, ತಾ.ಪಂ ಚುನಾವಣೆ ವಿಳಂಬದ ಪ್ರಕರಣ ನ್ಯಾಯಾಲಯದಲ್ಲಿದ್ದು, ತ್ವರಿತಗತಿಯಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 30 ತಿಂಗಳ ಅವಧಿಯಲ್ಲಿ ಇದುವರೆಗೂ ಒಂದು ಸ್ಥಳೀಯ ಸಂಸ್ಥೆ ಚುನಾವಣೆ ಕೂಡ ನಡೆದಿಲ್ಲ. ಹೀಗಾಗಿ ಅನಗತ್ಯ ವಿಳಂಬ ಮಾಡದೆ ಅಗತ್ಯ ಸ್ಥಳೀಯ ಸಂಸ್ಥೆಗಳಿಗೆ ವ್ಯಾಪ್ತಿ ಪುನರ್ ವಿಂಗಡಣೆ ಮಾಡಿಕೊಂಡು ಅಂತಿಮ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಬಳಿಕ ಚುನಾವಣಾ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗಿದೆ.