ಕಲಬುರಗಿ: ಪರಮಾತ್ಮನ ಬೆಳಕು ಕಾಣುವುದೇ ನಮ್ಮ ಭಕ್ತಿಯ ಉದ್ದೇಶವಾಗಿರಬೇಕು. ಇಂತಹ ಅಂಶಗಳು ನಮ್ಮಲ್ಲಿ ಮೂಡಿದಾಗ ಆಗ ಭಕ್ತಿಯು ಸಾರ್ಥಕತೆಯನ್ನು ಪಡೆಯುತ್ತದೆಯೆಂಬ ಮೇರು ಸಂದೇಶವು ಶಿವರಾತ್ರಿ ಹೊಂದಿದೆ. ಇದು ಆತ್ಮಾವಲೋಕನದ ಸಂದೇಶದ ವಾಹಕದಂತೆ ಕಾರ್ಯನಿರ್ವಹಿಸುತ್ತದೆ ಎಂದು ಪೂಜ್ಯ ನಾಗೇಶ ಮಹಾರಾಜ ಗುಜರಾತಿ ಹೇಳಿದರು.
ನಗರದ ಆಳಂದ ನಾಕಾ ಸಮೀಪದ ಐತಿಹಾಸಿಕ ಬಹು ಪುರಾತನ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ‘ದೇವಸ್ಥಾನ ಸಮಿತಿ’, ‘ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಜರುಗಿದ ಮಹಾ ಶಿವರಾತ್ರಿ ಪ್ರಯುಕ್ತ ಶಿವ-ಪಾರ್ವತಿಯರ ಕಲ್ಯಾಣ ಮಹೋತ್ಸವ ಹಾಗೂ ಜಾನಪದ ಶಿವರಾತ್ರಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಮನದ ಶುದ್ಧಿಕರಣದ ಅವಲೋಕನಕ್ಕೆ ಕಾರಣವಾದ, ಭಕ್ತಿಯಲ್ಲಿ ಮನದ ಪರಿಶುದ್ಧತೆ ಅಭಿವ್ಯಕ್ತಗೊಳ್ಳಬೇಕೆಂಬ, ಭಕ್ತಿಯು ಸರಳ ಹಾಗೂ ಸಹಜತೆಯಿಂದ ಕೂಡಿರಬೇಕು ಎಂದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹಾಗೂ ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಎಲ್ಲರಲ್ಲಿಯೂ ಭಕ್ತಿಯನ್ನು ಹೆಚ್ಚಿಸುವ, ಅಪ್ರತಿಮ, ಅಗೋಚರ, ಪರಿಪೂರ್ಣತೆಯ ಶಕ್ತಿಯಾದ ಶಿವನನ್ನು ಆರಾಧಿಸುವ ಹಬ್ಬವೇ ಮಹಾ ಶಿವರಾತ್ರಿಯಾಗಿದೆ ಎಂದರು.
ಜಗತ್ತಿನ ಸಕಲ ಜೀವರಾಶಿಗಳಲ್ಲಿ ಚೈತನ್ಯಾತ್ಮಕ ಶಕ್ತಿಯೇ ಪರಮಾತ್ಮನಾಗಿದ್ದಾನೆ. ಎಲ್ಲಾ ಚಟುವಟಿಕೆಗಳ ಒಡೆಯನಾದ ಶಿವನ ಆರಾಧನೆಯು ಭಾರತೀಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಮನುಷ್ಯ ಸಂಸಾರದ ಜಂಜಾಟದಲ್ಲಿ, ದಿನನಿತ್ಯದ ಒತ್ತಡದ ಬದುಕಿನಲ್ಲಿ ಶಾಂತಿಯನ್ನು ಕಳೆದುಕೊಂಡು, ಅಶಾಂತಿಯನ್ನು ಎದುರಿಸುತ್ತಿದ್ದಾನೆ. ಪ್ರಸ್ತುತ ದಿನಗಳಲ್ಲಿ ಮಾನಸಿಕ ನೆಮ್ಮದಿಗಾಗಿ ಭಕ್ತಿ, ಧ್ಯಾನ ಹೆಚ್ಚಾಗಿ ಅವಶ್ಯಕತೆಯಾಗಿದೆ ಎಂದರು.
ವಿಶಾಲ ಗುಜರಾತಿ ಮತ್ತು ನೇಹಾ ವಿ ಗುಜರಾತಿ ಅವರಿಗೆ ಶಿವ-ಪಾರ್ವತಿ ಕಲ್ಯಾಣ ಮಹೋತ್ಸವ ಜರುಗಿತು. ನಂತರ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಿಸಲಾಯಿತು. ಪೂಜ್ಯ ನಾಗೇಶ ಮಹಾರಾಜ ಅವರಿಗೆ ಬಳಗ ಹಾಗೂ ಪರಿಷತ್ ವತಿಯಿಂದ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಚಿಂತಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಶೋಕ ಕಾಳೆ, ಪ್ರಮುಖರಾದ ಕಿಶನಚಂದ ಮಾಲು, ಪಂಡಿತ ರವೀಂದ್ರ ಚೌಹಾಣ, ಗುಂಡೇರಾವ ಗುಜರಾತಿ, ಸುಭಾಷ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.