ಸುದ್ದಿ ಸಂಗ್ರಹ ಕಲಬುರಗಿ
ಯುನಿಸೆಫ್ ವಿಶ್ವದಾದ್ಯಂತ ಮಕ್ಕಳ ಹಕ್ಕುಗಳನ್ನು ರಕ್ಷಿಸಲು, ಅವರ ಆರೋಗ್ಯ, ಶಿಕ್ಷಣ, ಸಮಾನತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಲು ಕಾರ್ಯನಿರ್ವಹಿಸುತ್ತದೆ. ಎರಡನೇ ಮಹಾಯುದ್ಧದ ನಂತರ ಆರಂಭವಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಕ್ಕಳು ಮತ್ತು ತಾಯಂದಿರಿಗೆ ತುರ್ತು ನೆರವು, ಶಿಕ್ಷಣ, ಆರೋಗ್ಯ ಸೇವೆಗಳು, ಪೌಷ್ಟಿಕಾಂಶ ಮತ್ತು ರಕ್ಷಣೆ ಒದಗಿಸುತ್ತದೆ. ಜಾಗತಿಕ ಅಭಿವೃದ್ಧಿಯಲ್ಲಿ ಯುನಿಸೆಫ್ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಶಹಾಬಜಾರದ ಮಹಾದೇವ ನಗರದಲ್ಲಿನ ಶಿವಾ ವಿದ್ಯಾ ಮಂದಿರ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಯುನಿಸೆಫ್ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಯುನಿಸೆಫ್ ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆ, ಸಂಕಷ್ಟದ ಸಂದರ್ಭಗಳಲ್ಲಿ ನೆರವು, ವಿಪತ್ತುಗಳು ಮತ್ತು ಯುದ್ಧಗಳ ಸಮಯದಲ್ಲಿ ಮಕ್ಕಳಿಗೆ ಆಹಾರ, ನೀರು, ಆಶ್ರಯ ನೀಡುವುದು, ಸಮಾನತೆ, ಸೇರ್ಪಡೆ, ಲಿಂಗ ಸಮಾನತೆ, ಅಂಗವೈಕಲ್ಯ ಹೊಂದಿರುವ ಮಕ್ಕಳ ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವುದು, ಅವರನ್ನು ಮುಖ್ಯವಾಹಿನಿಗೆ ತರುವುದು, ಮಕ್ಕಳ ಹಕ್ಕುಗಳ ಸಮಾವೇಶದ ತತ್ವ ಅನುಷ್ಠಾನಗೊಳಿಸಲು ಸರ್ಕಾರಗಳಿಗೆ ಬೆಂಬಲ ನೀಡುವುದು ಮತ್ತು ಜಾಗತಿಕವಾಗಿ ಮಕ್ಕಳ ಪರ ವಕಾಲತ್ತು ವಹಿಸುವ ಪ್ರಮುಖವಾದ ಅನೇಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯುನಿಸೆಫ್ ಅಪಾರವಾದ ಕೊಡುಗೆ ನೀಡುತ್ತಿದೆ. ಮಕ್ಕಳು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕಿಯರಾದ ಪ್ರಿಯಾಂಕಾ, ಪ್ರೀತಿ, ಶಿಲ್ಪಾ, ವರ್ಷಾರಾಣಿ, ಚಂದ್ರಲೇಖಾ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.