ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪ ನಿವಾಸದ ಮೇಲೆ ಇ.ಡಿ ದಾಳಿ: ವೀರೇಂದ್ರ ಪಪ್ಪಿಯೊಂದಿಗೆ ನಂಟು

ರಾಜ್ಯ

ಬೆಂಗಳೂರು: ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಅವರ ಮೇಲೆ ನಡೆಯುತ್ತಿರುವ ತನಿಖೆಯ ಮುಂದುವರೆದ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಅವರ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಮುದ್ದಿಪಾಳ್ಯ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಇಂದು ಬೆಳಗ್ಗೆ 4.30ರ ಸುಮಾರಿಗೆ ಇ.ಡಿ ಅಧಿಕಾರಿಗಳ ಎರಡು ಇನೋವಾ ಕಾರುಗಳಲ್ಲಿ ಆಗಮಿಸಿ ಕೇಂದ್ರ ಭದ್ರತಾ ಪಡೆಯ ಸಹಯೋಗದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿಯ ಹಿನ್ನೆಲೆ
ಇ.ಡಿ ಅಧಿಕಾರಿಗಳು ಶಾಸಕ ವೀರೇಂದ್ರ ಪಪ್ಪಿ ಅವರ ಮನೆ, ಕಚೇರಿಗಳು ಮತ್ತು ಕಂಪನಿಗಳ ಮೇಲೆ ಈಗಾಗಲೇ ದಾಳಿ ನಡೆಸಿದ್ದಾರೆ. ಬೆಂಗಳೂರು, ಚಳ್ಳಕೆರೆ, ಗೋವಾ ಮತ್ತು ಚಿತ್ರದುರ್ಗ ಸೇರಿದಂತೆ ಒಟ್ಟು 17 ಕಡೆಗಳಲ್ಲಿ ಈ ದಾಳಿ ನಡೆದಿದೆ. ಶಾಸಕ ವೀರೇಂದ್ರ ಪಪ್ಪಿ ಅವರು ತಮ್ಮ ವಿವಿಧ ಕಂಪನಿಗಳಾದ ‘ರತ್ನ ಗೇಮಿಂಗ್ ಸಲ್ಯೂಷನ್ಸ್, ರತ್ನ ಗೋಲ್ಡ್ ಕಂಪನಿ, ರತ್ನ ಮಲ್ಟಿ ಸೋರ್ಸ್ ಕಂಪನಿ, ಪಪ್ಪಿ ಟೆಕ್ನಾಲಜೀಸ್ ಕಂಪನಿ, ಪಪ್ಪಿ ಟೂರ್ಸ್ & ಟ್ರಾವೆಲ್ಸ್ ಮತ್ತು ಪಪ್ಪಿ ಬೇರ್ ಬಾಕ್ಸ್’ ಮೂಲಕ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಮತ್ತು ಚಳ್ಳಕೆರೆಯಲ್ಲಿ ಗೇಮಿಂಗ್ ಆಪ್‌ಗಳಿಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ಆಧಾರದ ಮೇಲೆ ಇ.ಡಿ ಈ ತನಿಖೆಯನ್ನು ಕೈಗೊಂಡಿದೆ.

ಕುಸುಮ ಕುಟುಂಬದೊಂದಿಗೆ ವೀರೇಂದ್ರ ಪಪ್ಪಿ ಸಂಬಂಧ
ಶಾಸಕ ವೀರೇಂದ್ರ ಪಪ್ಪಿ ಅವರಿಗೆ ಹನುಮಂತರಾಯಪ್ಪ ಅವರ ಪುತ್ರ ಹಾಗೂ ಕುಸುಮ ಅವರ ಸಹೋದರ ಅನಿಲ್ ಅವರು ವ್ಯವಹಾರಿಕ ಪಾಲುದಾರರು ಎಂಬ ಮಾಹಿತಿ ಇ.ಡಿ ಅಧಿಕಾರಿಗಳಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ವೀರೇಂದ್ರ ಪಪ್ಪಿ ಅವರು ಚಿತ್ರದುರ್ಗದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ, ತಮ್ಮ ಎಲ್ಲಾ ವ್ಯವಹಾರಗಳನ್ನು ಬೆಂಗಳೂರಿನ ವಸಂತ ನಗರದಲ್ಲಿರುವ ತಮ್ಮ ಫ್ಲಾಟ್‌ನಿಂದಲೇ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಫ್ಲಾಟ್‌ನಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ದೊರಕಿದ್ದು, ಅದರ ಮುಂದುವರಿದ ಭಾಗವಾಗಿ ಕುಸುಮ ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಹನುಮಂತರಾಯಪ್ಪ ಅವರ ನಿವಾಸದಲ್ಲಿ ಪರಿಶೀಲನೆ ಮುಂದುವರಿದಿದೆ. ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *