ಚಿತ್ತಾಪುರ: ಕರುನಾಡಿನಲ್ಲಿ ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧಿಯಾದ ಸಿದ್ಧಗಂಗಾದಂತೆ ಕಲ್ಯಾಣ ಕರ್ನಾಟಕದ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನವು ಅನ್ನ, ಅಕ್ಷರ, ಅರಿವು ನೀಡುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ನಾಲವಾರ ಜಾತ್ರಾ ಮಹೋತ್ಸವದ ಅಂಗವಾಗಿ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ದರ್ಶನಾಶೀರ್ವಾದ ಪಡೆಯಲು ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶ್ರೇಷ್ಠ ಗುರುಪರಂಪರೆ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಮನ ಉದ್ಧರಿಸುವ ಕಾರ್ಯದಲ್ಲಿ ತೊಡಗಿರುವ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಸಂಸ್ಥಾನವು ಇತರ ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾಗಿದೆ ಎಂದರು.
ತುಮಕೂರಿನಿಂದ ಬಂದಿರುವ ನಾನು ಸಿದ್ಧಗಂಗೆಯ ತ್ರಿವಿಧ ದಾಸೋಹಿ ಲಿಂ.ಡಾ.ಶಿವಕುಮಾರ ಮಾಹಾಸ್ವಾಮಿಗಳ ನೆರಳಿನಲ್ಲಿ ಆಧ್ಯಾತ್ಮಿಕ ಸಂಸ್ಕಾರ ಪಡೆದು ಬೆಳೆದಿದ್ದೆನೆ. ಅವರಂತಹ ಹಲವು ಪೂಜ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವೆ ಎಂದರು.
ಜಾತ್ರಾ ಸಂದರ್ಭದಲ್ಲಿ ನಾಲವಾರದ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಆಶೀರ್ವಾದ ದೊರೆತಿದ್ದು ನನ್ನ ಸೌಭಾಗ್ಯವೇ ಸರಿ.ಅವರ ನೇತೃತ್ವದಲ್ಲಿ ಮತ್ತಷ್ಟು ಧರ್ಮಕಾರ್ಯಗಳು ಈ ನೆಲದಲ್ಲಿ ನಡೆಯಲಿ ಎಂದರು.
ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿ, ನಾಲವಾರ ಶ್ರೀಮಠ ನಮ್ಮ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ, ಲಕ್ಷಾಂತರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ ಎಂದರು.
ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ ಈ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.
ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿವಗಪ್ಪ ಸಾವು ಸನ್ನತಿ, ಶಿವರೆಡ್ಡಿ ಶಿರಾ ಕುಲಕುಂದಿ, ವಿರುಪಾಕ್ಷಿಯ ಸ್ವಾಮಿ, ಶಿವಾನಂದ ಪಡಿಶೆಟ್ಟಿ
ಮಹಾದೇವ ಗಂವ್ಹಾರ ಸೇರಿದಂತೆ ಅನೇಕರು ಇದ್ದರು.