ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಈ ದೇಶದ ಮೂರು ಬ್ಯಾಂಕುಗಳನ್ನು ಬಹಳ ಮುಖ್ಯವೆಂದು ವರ್ಗೀಕರಣ ಮಾಡಿದೆ. ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳನ್ನು ವ್ಯವಸ್ಥಿತವಾಗಿ ಅತ್ಯಂತ ಮುಖ್ಯ ಹಣಕಾಸು ಸಂಸ್ಥೆಗಳೆಂದು ಆರ್ಬಿಐ ಪರಿಗಣಿಸಿದೆ.
ಇವುಗಳನ್ನು ಡಿ-ಎಸ್ಐಬಿ ಅಥವಾ ದೇಶೀಯವಾಗಿ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್’ಗಳು ಎಂದು ವರ್ಗೀಕರಿಸಿದೆ. ಆರ್ಬಿಐ ಪ್ರಕಾರ ದೇಶದ ಬ್ಯಾಂಕಿಂಗ್ ವಲಯದಲ್ಲಿ ಈ ಮೂರು ಬ್ಯಾಂಕ್’ಗಳು ಬಹಳ ಮುಖ್ಯಸ್ಥಾನ ಹೊಂದಿರುತ್ತವೆ.
ಈ ಮೂರು ಬ್ಯಾಂಕ್’ಗಳ ಪೈಕಿ ಎಸ್ಬಿಐ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ, ಎಚ್ಡಿಎಫ್ಸಿ ಮತ್ತು ಐಸಿಐಸಿಐ ಪ್ರೈವೇಟ್ ಸೆಕ್ಟರ್ ಬ್ಯಾಂಕ್’ಗಳಾಗಿವೆ. ಕಳೆದ ವರ್ಷದಲ್ಲೂ (2024) ಈ ಮೂರು ಬ್ಯಾಂಕುಗಳನ್ನು ಆರ್ಬಿಐ ಡಿ-ಎಸ್ಐಬಿಗಳೆಂದು ವರ್ಗೀಕರಿಸಿತ್ತು. ಈ ವರ್ಷವೂ ಈ ಸ್ಥಾನಮಾನ ಮುಂದುವರಿದಿದೆ.
ಡಿ-ಎಸ್ಐಬಿಗಳೆಂದು ವರ್ಗೀಕರಿಸಿದರೆ ಏನು ಉಪಯೋಗ ?
ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್’ಗಳು ಭಾರತದ ಅತಿದೊಡ್ಡ ಬ್ಯಾಂಕ್’ಗಳೆನಿಸಿವೆ. ಭಾರತದ ಆರ್ಥಿಕತೆ ಸರಾಗವಾಗಿ ಕೆಲಸ ಮಾಡಲು ಈ ಬ್ಯಾಂಕ್’ಗಳ ಪಾತ್ರ ಬಹಳ ಮಹತ್ವದ್ದು. ಈ ಬ್ಯಾಂಕ್’ಗಳು ವಿಫಲವಾದರೆ ದೇಶದ ಹಣಕಾಸು ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಈ ಮೂರು ಬ್ಯಾಂಕ್’ಗಳು ವಿಫಲವಾಗದಂತೆ ವಿಶೇಷ ಎಚ್ಚರ ವಹಿಸಬಹುದು. ವಿಶೇಷ ಕ್ರಮಗಳನ್ನು ಕೈಗೊಂಡು ಈ ಬ್ಯಾಂಕ್’ಗಳು ಕುಸಿಯದಂತೆ ನೋಡಿಕೊಳ್ಳಬಹುದು. ಹಾಗೆಯೇ ಈ ಬ್ಯಾಂಕುಗಳಿಗೆ ಆರ್ಬಿಐ ಹೆಚ್ಚುವರಿ ಮಾರ್ಗಸೂಚಿ ನೀಡುತ್ತದೆ.
ಈ ಮೂರು ಬ್ಯಾಂಕುಗಳಿಗೆ ಆರ್ಬಿಐನ ಹೆಚ್ಚುವರಿ ಮಾರ್ಗಸೂಚಿಗಳೇನು ?
ಈ ಮೂರು ಡಿ-ಎಸ್ಐಬಿಗಳಿಗೆ ಆರ್ಬಿಐ ವಿಶೇಷ ಮಾರ್ಗಸೂಚಿಗಳನ್ನು ನೀಡುತ್ತದೆ. ಅದರ ಪ್ರಕಾರ ಕ್ಯಾಪಿಟಲ್ ಕನ್ಸರ್ವೇಶನ್ ಬಫರ್ ಜೊತೆಗೆ ಹೆಚ್ಚುವರಿ ಸಿಇಟಿ1 (ಕಾಮನ್ ಈಕ್ವಿಟಿ ಟಯರ್1) ಅನ್ನೂ ಇರಿಸುವ ಅವಶ್ಯಕತೆ ಇರುತ್ತದೆ.
ಕ್ಯಾಪಿಟಲ್ ಕನ್ಸರ್ವೇಶನ್ ಬಫರ್ ಎಂದರೆ ಒಂದು ಬ್ಯಾಂಕ್ ಅಕಸ್ಮಾತ್ ಆಗಿ ನಷ್ಟವಾದರೆ ಅದರಿಂದ ಪಾರಾಗಲು ಮುನ್ನೆಚ್ಚರಿಕೆಯಾಗಿ ಇರಿಸಿಕೊಳ್ಳುವ ಕನಿಷ್ಠ ಮಟ್ಟದ ಹೆಚ್ಚುವರಿ ಬಂಡವಾಳವಾಗಿರುತ್ತದೆ. ಇನ್ನು ಸಿಇಟಿ1 ಅಥವಾ ಕಾಮನ್ ಈಕ್ವಿಟಿ ಟಯರ್ನಲ್ಲಿ ಸಾಮಾನ್ಯ ಷೇರುಗಳು ಹಾಗೂ ಲಾಭಾಂಶಗಳು ಇರುತ್ತವೆ. ಈ ಮೂರು ಬ್ಯಾಂಕುಗಳು ಸಿಇಟಿ1 ಅನ್ನು ತುಸು ಹೆಚ್ಚು ಇಟ್ಟುಕೊಂಡಿರಬೇಕು ಎಂಬುದು ಆರ್ಬಿಐನ ಮಾರ್ಗಸೂಚಿ ನಿರ್ದಿಷ್ಟಪಡಿಸುತ್ತದೆ.