ನವದೆಹಲಿ: ಮೊಂಥಾ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆ ಭಾರತೀಯ ರೈಲ್ವೆ 100ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ. ಜೊತೆಗೆ 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿವೆ.
ಚಂಡಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ, ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಭಾರತೀಯ ರೈಲ್ವೆ 100ಕ್ಕೂ ಹೆಚ್ಚು ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಜೊತೆಗೆ ಹಲವಾರು ರೈಲುಗಳ ಮಾರ್ಗದಲ್ಲಿಯೂ ಬದಲಾವಣೆ ಮಾಡಿದ್ದು, ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಿದೆ.
ಆಂಧ್ರಪ್ರದೇಶ ಕರಾವಳಿ ಪ್ರದೇಶಗಳಾದ ಕಾಕಿನಾಡ, ಭೀಮಾವರಂ, ವಿಜಯವಾಡ, ರಾಜಮಂಡ್ರಿ ಮತ್ತು ವಿಶಾಖಪಟ್ಟಣಂ ಕಡೆ ಭೂಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಭಾರತೀಯ ರೈಲ್ವೆ ಇಲಾಖೆಯು ರೈಲು ಸಂಚಾರ ರದ್ದುಗೊಳಿಸಿದೆ. ಜೊತೆಗೆ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳುವ ಮುನ್ನ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್, ಐಆರ್‌ಸಿಟಿಸಿ ಮೂಲಕ ಅಪ್‌ಡೇಟ್‌ಗಳನ್ನು ತಿಳಿದುಕೊಳ್ಳಿ ಹಾಗೂ ರದ್ದಾದ ಎಲ್ಲಾ ರೈಲುಗಳ ಪೂರ್ಣ ಮರುಪಾವತಿ ನೀಡಲಾಗುವುದು ಎಂದು ತಿಳಿಸಿದೆ.
ಇನ್ನೂ ಆಂಧ್ರದಲ್ಲಿ 30ಕ್ಕೂ ಹೆಚ್ಚು ಫ್ಲೈಟ್‌ಗಳ ಹಾರಾಟ ಬಂದ್ ಆಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಆಂಧ್ರಪ್ರದೇಶದ ಹಲವು ನಗರಗಳ ನಡುವಿನ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಒಟ್ಟು 35 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಶಂಷಾಬಾದ್‌ನಿಂದ 17 ನಿರ್ಗಮನಗಳು ಮತ್ತು ವಿಶಾಖಪಟ್ಟಣ, ವಿಜಯವಾಡ ಮತ್ತು ರಾಜಮಂಡ್ರಿಯಿಂದ 18 ಆಗಮನಗಳು ಬಂದ್ ಮಾಡಲಾಗಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದುಗೊಳಿಸಿವೆ.