ಕಲಬುರಗಿ: ವಿಶ್ವವಿದ್ಯಾಲಯದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಒಂದು ಸುಲಿಗೆ ಮತ್ತು 5 ಕಳ್ಳತನ ಪ್ರಕರಣಕ್ಕೆ ಇಬ್ಬರನ್ನು ಬಂಧಿಸಿ ಅವರಿಂದ 7,62,400 ರೂ ಮೌಲ್ಯದ 61 ಗ್ರಾಂ ಬಂಗಾರ ಮತ್ತು 680 ಗ್ರಾಂ ಬೆಳ್ಳಿಯ ಆಭರಣಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಫಜಲಪುರ ಮೂಲದ ನೃಪತುಂಗ ಕಾಲೋನಿಯ ನಿವಾಸಿ ಕಲ್ಲಪ್ಪ ಅಲಿಯಾಸ್ ಸಂಜು ಪೂಜಾರಿ (24) ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಣ ಗ್ರಾಮದ ನಿವಾಸಿ ಸಂತೋಷ (30) ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ಸುಲಿಗೆ, ಐದು ಕಳತನ ಸೇರಿ ಒಟ್ಟು 6 ಪ್ರಕರಣಗಳಾಗಿವೆ. ಸುಲಿಗೆ ಪ್ರಕರಣದ 8 ಗ್ರಾಂ ಬಂಗಾರದ ಚೈನ್, ಕಳ್ಳತನ ಪ್ರಕರಣದ 300 ಗ್ರಾಂ ಬೆಳ್ಳಿಯ ಪ್ಲೇಟ್ ಹಾಗೂ ಲೋಟ, 5 ಗ್ರಾಂ ಬಂಗಾರದ 2 ಸುತ್ತುಂಗುರ, 160 ಗ್ರಾಂ ಬೆಳ್ಳಿಯ ಆಭರಣ ಮತ್ತು 10 ಗ್ರಾಂ ಬoಗಾರದ ಆಭರಣಗಳು, 220 ಗಾಂ ಬೆಳ್ಳಿಯ ಆಭರಣಗಳು, 5 ಗ್ರಾಂ ಬಂಗಾರದ 2 ಸುತ್ತುಂಗುರ ಹೀಗೆ ಒಟ್ಟು 5 ಮನೆ ಕಳ್ಳತನ ಹಾಗೂ 1 ಸುಲಿಗೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಆರೋಪಿತರಿಂದ ಅಂದಾಜು 27,62,400 ರೂ. ಮೌಲ್ಯದ ಆಭರಣಗಳು ಹಾಗೂ 680 ಗ್ರಾಂ ಬೆಳ್ಳಿಯ ಆಭರಣಗಳು ವಶಪಡಿಸಿಕೊಳ್ಳಲಾಗಿದೆ ಎಂದರು.
ಲಿವಿಂಗ್ ಟುಗೆದರ್ಗಾಗಿ ಕಳ್ಳತನ
ಕಲ್ಲಪ್ಪ ಪೂಜಾರಿ ಕೂಲಿ ಕೆಲಸಗಾರನಾಗಿದ್ದು, ಆತ ಯುವತಿಯೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಬೆಳೆಸಿ ದುಂದು ವೆಚ್ಚಕ್ಕಾಗಿ ಮೊದಲು ಅಲ್ಲಲ್ಲಿ ಕಿಸೆ ಕಳ್ಳತನ ಮಾಡುತ್ತಿದ್ದನು. ಈತ ಒಟ್ಟು 4 ಮನೆ ಕಳ್ಳತನ ಮಾಡಿದ್ದು, ಇತ್ತೀಚೆಗೆ ಮಹಿಳೆಯ ಮಂಗಳಸೂತ್ರ ಸುಲಿಗೆ ಮಾಡಿದ ಪ್ರಕರಣ ಬೇಧಿಸಿದ ವೇಳೆ ಉಳಿದ 5 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಸಂತೋಷ ಎಂಬಾತ ಕೇವಲ ಸುಲಿಗೆ ಪ್ರಕರಣದಲ್ಲಿ ಮಾತ್ರ ಭಾಗಿಯಾಗಿದ್ದನು. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ
ದಾರುನಾಯಕ ತಾಂಡಾದ ನಿವಾಸಿ ಸುನೀತಾ ರಾಠೋಡ
(42) ಎಂಬ ಮಹಿಳೆ ನವೆಂಬರ್ 22 ರಂದು ಬೆಳಗ್ಗೆ 10.30 ಗಂಟೆಗೆ ಓಂ ನಗರ ಗೇಟ್ ಹತ್ತಿರ ಕೂಲಿ ಕೆಲಸದ ಸಲುವಾಗಿ ನಿಂತಿರುವಾಗ ಕಲ್ಲಪ್ಪ ಮತ್ತು ಸಂತೋಷ ಇಬ್ಬರು ಗಿಲಾವ್ (ಪ್ಲಾಸ್ಟರ್) ಮಾಡುವ ಕೆಲಸವಿದೆ ಒಬ್ಬರು ಹೆಣ್ಣು ಮಗಳು ಕೆಲಸಕ್ಕೆ ಬೇಕಾಗಿದೆ ಎಂದಾಗ ಸುನೀತಾ ಅವರ ಜತೆ ಕೆಲಸಕ್ಕೆಂದು ಹೋಗಿದ್ದರು. ಕೇಂದ್ರಿಯ ವಿಶ್ವವಿದ್ಯಾಲಯದ ಹತ್ತಿರದ ವಾಜಪೇಯಿ ಲೇಔಟ್, ಹತ್ತಿರ ಆಟೋ ನಿಲ್ಲಿಸಿ ನಡೆದುಕೊಂಡು ಹೋಗುವಾಗ ಸಂತೋಷ ಸಲಾಕೆ, ಪುಟ್ಟಿ, ಟಿಕಾವ ತರುತ್ತೆನೆ ಎಂದು ಹೋದನು. ಕಲ್ಲಪ್ಪ ಮರಳುಮಾಡಿ ಸುನೀತಾ ಕೊರಳಲ್ಲಿನ 3 ಗ್ರಾಂ ಮಂಗಳಸೂತ್ರ ಕಿತ್ತುಕೊಂಡು ಹೋಗಿದ್ದನು. ಸುನೀತಾ ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದಲ್ಲಿನ ಆರೋಪಿತರ ಪತ್ತೆ ಕುರಿತು ನನ್ನ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತ ಕನಿಕಾ ಸಿಕ್ರಿವಾಲ್, ಉಪ ಪೊಲೀಸ್ ಆಯುಕ್ತ ಪ್ರವೀಣ ನಾಯಕ, ಸಬ್ ಅರ್ಬನ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಠಾಣೆಯ ಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಸಿಬ್ಬಂದಿ ತಂಡವು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಪ್ರಕರಣಗಳಲ್ಲಿನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿಐ ಚಂದ್ರಶೇಖರ್ ತಿಗಡಿ ಸೇರಿದಂತೆ ಅನೇಕರು ಇದ್ದರು.