ಚಿತ್ತಾಪುರ: ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆ ಮರೆಸುವ ಶಕ್ತಿಯಿದೆ, ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಸಾಧನವಾಗಿ ಕೆಲಸ ಮಾಡುತ್ತದೆ ಎಂದು ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು.
ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀಮಠದ ಸಿದ್ಧತೋಟೇಂದ್ರ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ದಾಸರ ಹಾಡುಗಳು, ಸರ್ವಜ್ಞರ ತ್ರಿಪದಿಗಳು, ಸ್ವರ ವಚನಗಳಿಗೆ ಭಾವಗೀತೆಗಳಿಗೆ ಸಂಗೀತ ರೂಪ ನೀಡಿದರೆ ಎಲ್ಲವನ್ನೂ ಮರೆಸಿ ತನ್ನೊಳಗೆ ಸೆಳೆದುಕೊಳ್ಳುವ ಆಯಸ್ಕಾಂತದಂತಹ ಶಕ್ತಿ ಇದೆ. ಇದು ಮನಸ್ಸಿಗೆ ಚೈತನ್ಯ ನೀಡಿ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ನಿವಾರಣೆಗೆ ಇದೆ ಮದ್ದು ಎಂದರು.
ಸಾಹಿತ್ಯ ಮತ್ತು ಸಂಗೀತ ಮನುಷ್ಯನಲ್ಲಿ ತಾಮಸ ಗುಣಗಳನ್ನು ಕಳೆದು ಸಾತ್ವಿಕತೆ ತುಂಬುತ್ತವೆ. ಹಿರಿಯರು ಹಿಂದೆ ಹಬ್ಬ ಹರಿದಿನ ಸಂಗೀತ ಸಾಹಿತ್ಯ ಗೋಷ್ಠಿಗಳ ಮೂಲಕ ಅರ್ಥಪೂರ್ಣ ಆಚರಣೆ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದರು ಎಂದರು.
ಸಂಗೀತ ಮತ್ತು ಸಾಹಿತ್ಯಕ್ಕೆ ಸೋಲದ ಮನಸ್ಸುಗಳೇ ಇಲ್ಲ. ಹಾಗೆನಾದರೂ ಸೋಲದೆ ಇದ್ದರೆ ಅದು ಮನಸ್ಸೆ ಅಲ್ಲ ಎಂಬ ಮಾತನ್ನು ಉದಾಹರಿಸಿದ ಶ್ರೀಗಳು ನಾಲವಾರ ಶ್ರೀಮಠ ಭಕ್ತರಲ್ಲಿ ಕೇವಲ ಧಾರ್ಮಿಕ ಸಂಸ್ಕಾರ ಮಾತ್ರ ಬಿತ್ತದೆ ಕಳೆದ ನಾಲ್ಕು ದಶಕದಿಂದ ಸಾಹಿತ್ಯ ಹಾಗೂ ಸಂಗೀತದ ಅಭಿರುಚಿಯನ್ನು ಜನಮಾನಸದಲ್ಲಿ ಮೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ ಎಂದರು.
ದೀಪಾವಳಿಯ ಶುಭ ಸಂದರ್ಭದಲ್ಲಿ ಭಗವಂತ ನಾಡಿನ ಜನರ ಕಷ್ಟಗಳೆಂಬ ಕತ್ತಲೆಯನ್ನು ಕಳೆದು ಸುಖ-ಸಮೃದ್ಧಿಯ ಹೊಸ ಬೆಳಕನ್ನು ನೀಡಿ ಹರಸಿ ಆಶೀರ್ವದಿಸಲಿ ಎಂದು ಹಾರೈಸಿದರು.
ಇದೆ ಸಂದರ್ಭದಲ್ಲಿ ಮರಿಯಪ್ಪ ಮಾಳಬಾ ನಾಲವಾರ, ಪ್ರಭಾಕರ್ ರೆಡ್ಡಿ ತಾಂಡೂರ್ ತೆಲಂಗಾಣ, ಗುರುಶಾಂತಯ್ಯ ಸ್ವಾಮಿ ವಾಡಿ ಭಕ್ತರು ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಮಹಾ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ರುದ್ರಗೌಡ ಪಾಟೀಲ ರಾಂಪೂರ, ಮಲಕಪ್ಪ ಪಾಟೀಲ ರಾಯ್ಚೂರ್, ಶಿವರೆಡ್ಡಿ ಕುಲ್ಕುಂದಿ, ಶ್ರೀಕಾಂತ್ ಗೌಡ ಮಡ್ನಾಳ್ ಇಬ್ರಾಂಪುರ್, ಈರಣ್ಣ ಇಂಗಳಗಿ, ಮಹಾದೇವ ಗಂವ್ಹಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೆರೆದ ಭಕ್ತರನ್ನು ಸಮ್ಮೋಹನಗೊಳಿಸಿದ ಸಂಗೀತೋತ್ಸವ
ಈ ಸಂದರ್ಭದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮ ನೆರೆದ ಭಕ್ತರನ್ನು ಸಮ್ಮೋಹನಗೊಳ್ಳುವಂತೆ ಮಾಡಿತು.
ಹಿರಿಯ ಗಾಯಕ ಶರಣಪ್ಪ ಗೋನಾಳ ಹಾಗೂ ಪ್ರತಿಭಾ ಗೋನಾಳ ರಾಯಚೂರು ಅವರ ಭಕ್ತಿಗೀತೆ ಹಾಗೂ ಜಾನಪದ ಗೀತೆ, ವಚನಗಳ ಗಾಯನ ಯುವ ಗಾಯಕ ಸಿದ್ದು ಅವರಾದಿ ಹಾಡಿದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಬರೆದ ವಚನೋಲ್ಲಾಸ ಕೃತಿಯ ವಚನಗಳ ಸುಮಧುರ ಗಾಯನ ನೆರೆದಿದ್ದ ಸಹಸ್ರಾರು ಭಕ್ತರ ಮನಸೂರೆಗೊಳಿಸಿ ಯಶಸ್ವಿಯಾದವು.
ಚಂದ್ರಶೇಖರ ಗೋಗಿ ಅವರ ಕೊಳಲು ವಾದನ, ವೀರೇಂದ್ರ ಕುರಡಿ ತಬಲಾ, ಸುಧಾಕರ ಅಸ್ಕಿಹಾಳ ಕೀಬೋರ್ಡ್, ಗೋಪಾಲ ಗುಡಿಬಂಡಿ ಪ್ಯಾಡ್. ಅವರ ಕ್ಲಾರಿಯೊನೆಟ್ ವಾದನ, ಕುಮಾರಿ ಪ್ರತ್ಯಕ್ಷ ಚಿತ್ತಾಪುರ ಅವರಿಂದ ಭರತನಾಟ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮವನ್ನು ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿ, ವಂದಿಸಿದರು.